ಕೊಪ್ಪಳ : ಸಾರಿಗೆ ಸಂಪರ್ಕ ಸುಗಮಗೊಳಿಸುವ ನಿಟ್ಟಿನಲ್ಲಿ ಹೆದ್ದಾರಿಗಳಲ್ಲಿ ಟೋಲ್ಗಳನ್ನು ನಿರ್ಮಿಸಲಾಗಿದೆ. ಆದರೆ, ಅವೈಜ್ಞಾನಿಕವಾಗಿ ನಿರ್ಮಿಸಿರುವ ಟೋಲ್ ಪ್ಲಾಜಾಗಳಿಂದ ಜನರು ರೋಸಿ ಹೋಗಿದ್ದಾರೆ.
ಜಿಲ್ಲೆಯಲ್ಲಿ ಒಂದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂರು ಟೋಲ್ ಪ್ಲಾಜಾಗಳನ್ನು ನಿರ್ಮಿಸಿದ್ದು, ಮೂರೂ ಕಡೆ ಶುಲ್ಕವನ್ನು ಪಾವತಿಸಬೇಕಿದೆ. ವಿಚಿತ್ರವೆಂದರೆ, ನಾಲ್ಕು ಕಿಲೋಮೀಟರ್ ವ್ಯಾಪ್ತಿಯಲ್ಲಿ ಎರಡು ಕಡೆ ಟೋಲ್ಗಳನ್ನು ನಿರ್ಮಿಸಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ರಾಷ್ಟ್ರೀಯ ಹೆದ್ದಾರಿ-50 ಚತುಷ್ಪಥ ಸೊಲ್ಲಾಪುರ-ಬೆಂಗಳೂರು ಹೆದ್ದಾರಿ ಸುಮಾರು 80 ಕಿ.ಮೀ ಇದೆ. ಈ ಎಂಬತ್ತು ಕಿಲೋಮೀಟರ್ನಲ್ಲಿ ಒಟ್ಟು ಮೂರು ಕಡೆ ಟೋಲ್ ಪ್ಲಾಜಾ ಇದೆ. ಅದರಲ್ಲೂ ಕೊಪ್ಪಳ ತಾಲೂಕಿನ ಹಿಟ್ನಾಳ್ ಹಾಗೂ ಶಹಪುರ ಬಳಿ ಒಂದೊಂದು ಟೋಲ್ ಗೇಟ್ ಇವೆ. ಈ ಎರಡೂ ಟೋಲ್ ಗೇಟ್ಗಳ ನಡುವಿನ ಅಂತರ ಕೇವಲ 4 ಕಿಲೋಮೀಟರ್ ಮಾತ್ರ. ಕೇವಲ 4 ಕಿಲೋಮೀಟರ್ ಅಂತರದಲ್ಲಿ ಪ್ರಯಾಣಿಕರು ಎರಡೆರಡು ಬಾರಿ ಸುಂಕ ಪಾವತಿಸಬೇಕಾಗಿದೆ.
ಅವೈಜ್ಞಾನಿಕವಾಗಿರುವ ಟೋಲ್ ಪ್ಲಾಜಾಗಳನ್ನು ತೆರವು ಮಾಡಿ ಎಂದು ಅನೇಕ ಬಾರಿ ಈ ಭಾಗದ ಜನರು ಹೋರಾಟ ನಡೆಸಿದ್ದಾರೆ. ಆದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಜಿಎಂಆರ್ ಕಂಪನಿಯವರಿಗೆ ಈ ಎರಡೂ ಟೋಲ್ ಪ್ಲಾಜಾದಲ್ಲಿ ಟೋಲ್ ಸಂಗ್ರಹಕ್ಕೆ ಅವಕಾಶ ನೀಡಿರುವುದು ವಿಪರ್ಯಾಸ.
ಈ ಕುರಿತು ಸಂಸದ ಕರಡಿ ಸಂಗಣ್ಣ ಮಾತನಾಡಿ, ಈ ಅವೈಜ್ಞಾನಿಕ ಟೋಲ್ ಪ್ಲಾಜಾಗಳನ್ನು ತೆರವುಗೊಳಿಸುವಂತೆ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷರನ್ನು ಭೇಟಿಯಾಗಿ ಒತ್ತಾಯಿಸಲಾಗುವುದು ಎಂದಿದ್ದಾರೆ. ಕೊಪ್ಪಳ ಜಿಲ್ಲಾಡಳಿತವು ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಈ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡಲು ಸೂಚಿಸಿದೆ. ಈ ವರದಿಯ ಆಧಾರದಲ್ಲಿ ಜಿಲ್ಲಾಧಿಕಾರಿಗಳು ಜಿಎಂಆರ್ ಹಾಗೂ ಸ್ಥಳೀಯರೊಂದಿಗೆ ಚರ್ಚೆ ನಡೆಸಲಿದ್ದಾರೆ. ಈಗಾಗಲೇ ಕಳೆದ ಆಗಸ್ಟ್ 16ರಂದು ಜಿಲ್ಲಾಧಿಕಾರಿಗಳು ಒಂದು ಬಾರಿ ಚರ್ಚೆ ನಡೆಸಿದ್ದಾರೆ.