ಗಂಗಾವತಿ: ಮದ್ಯ ಮಾರಾಟದಲ್ಲಿ ಪ್ರಾಬಲ್ಯ ಸಾಧಿಸುವ ಸಂಬಂಧ ಉಂಟಾದ ವಾಗ್ವಾದ ಹಿಂಸೆಗೆ ತಿರುಗಿ ಎರಡು ಗುಂಪುಗಳು ಘರ್ಷಣೆಗಳಿದ ಘಟನೆ ತಾಲೂಕಿನ ಮಲ್ಲಾಪುರದಲ್ಲಿ ನಡೆದಿದೆ.
ತಾಲೂಕಿನ ಮಲ್ಲಾಪುರದಲ್ಲಿ ಅಧಿಕೃತ ಮದ್ಯದ ಅಂಗಡಿ ಇಲ್ಲ. ಆದರೆ ಗಂಗಾವತಿಯಿಂದ ನಿತ್ಯ ಸಾವಿರಾರು ಬಾಟಲಿ ಮದ್ಯ ಗ್ರಾಮಕ್ಕೆ ಸರಬರಾಜಾಗುತ್ತಿದೆ. ಮದ್ಯ ಮಾರಾಟ ಮಾಡುವ ಇಬ್ಬರು ಪ್ರಭಾವಿ ವ್ಯಕ್ತಿಗಳ ಬೆಂಬಲಿಗರ ಮಧ್ಯೆ ಪ್ರಾಬಲ್ಯ ಸಾಧಿಸುವ ವಿಚಾರವಾಗಿ ಗಲಾಟೆ ನಡೆದಿದೆ ಎನ್ನಲಾಗಿದೆ.
ಗ್ರಾಮದ ಬಹುತೇಕ ಶೇ.95ರಷ್ಟು ಜನ ಕೂಲಿಕಾರ್ಮಿಕರಾಗಿದ್ದು, ಇವರೆಲ್ಲ ಬೆಟ್ಟದಲ್ಲಿ ಕಲ್ಲು ಹೊಡೆದು ಜೀವನ ಸಾಗಿಸುತ್ತಾರೆ. ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದ ಈ ಗ್ರಾಮದಲ್ಲಿ ಮದ್ಯ ಮಾರಾಟಕ್ಕೆ ಪ್ರಾಬಲ್ಯ ಸಾಧಿಸುವ ಸಂಬಂಧ ಉಂಟಾದ ಗಲಾಟೆ ಈಗ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಅಕ್ರಮ ಮದ್ಯ ಮಾರಾಟ ತಡೆಯಬೇಕಿದ್ದ ಅಬಕಾರಿ ಇಲಾಖೆ ಹಾಗೂ ಕಂದಾಯ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಸಮಸ್ಯೆಗೆ ಮೂಲ ಕಾರಣ ಎಂದು ಗ್ರಾಮದ ಯುವಕರು ಆರೋಪಿಸಿದ್ದಾರೆ.