ಗಂಗಾವತಿ: ಇಲ್ಲಿನ ನಗರಸಭೆಯ ಆಯುಕ್ತ ವಿರೂಪಾಕ್ಷಮೂರ್ತಿ ಅವರ ಮೇಲೆ ಜಾತಿನಿಂದನೆ ಪ್ರಕರಣ ದಾಖಲು ಮಾಡಿದ್ದ 28ನೇ ವಾರ್ಡ್ ಸದಸ್ಯ ಎಫ್ ರಾಘವೇಂದ್ರ ಮೇಲೆ ಎರಡು ಪ್ರತ್ಯೇಕ ಪ್ರಕರಣಗಳು ನಗರ ಠಾಣೆಯಲ್ಲಿ ದಾಖಲಾಗಿವೆ.
ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಸಾರ್ವಜನಿಕವಾಗಿ ನಮ್ಮ ಮೇಲಧಿಕಾರಿಯ ಮೇಲೆ ಹಲ್ಲೆಗೆ ಮುಂದಾದ ಹಾಗೂ ಇತರ ಸಿಬ್ಬಂದಿಗೆ ಮಾನಸಿಕ ಕಿರುಕುಳ ನೀಡುತ್ತಿರುವ ಆರೋಪದಡಿ ನಗರಸಭೆಯ ಸಿಬ್ಬಂದಿ ಪರವಾಗಿ ವನರಾಜ ಎಂಬುವರು ರಾಘವೇಂದ್ರ ಅವರ ಮೇಲೆ ದೂರು ದಾಖಲಿಸಿದ್ದಾರೆ.
ಗಂಗಾವತಿ ನಗರಸಭೆಯ ಪ್ರವೇಶದ್ವಾರದಲ್ಲಿ ನಿಂತು ಸಾರ್ವಜನಿಕರ ಪ್ರವೇಶಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ದಾರಿ ಬಿಡುವಂತೆ ಕೇಳಿದ್ದಕ್ಕೆ ತಮ್ಮನ್ನು ಜಾತಿಪದ ಬಳಕೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಮತ್ತೊಬ್ಬ ವ್ಯಕ್ತಿ ಗಾಂಧಿನಗರದ ಪಾಮಣ್ಣ ಎಂಬುವರು ರಾಘವೇಂದ್ರ ವಿರುದ್ಧ ದೂರು ನೀಡಿದ್ದಾರೆ.
ಈ ಪ್ರಕರಣಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡ ಶಂಕರಾವ್ ಉಂಡಾಳೆ ಹಾಗೂ ಹಿರಿಯ ಉದ್ಯಮಿ ಎಫ್. ಷಣ್ಮುಖಪ್ಪ ಕೂಡ ಕುಮ್ಮಕ್ಕು ನೀಡಿದ್ದಾರೆ ಎಂದು ಪಾಮಣ್ಣ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಎರಡೂ ದೂರುಗಳ ಅನ್ವಯ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: ಚಾಮರಾಜನಗರ: ತಾಯಿ ಮಡಿಲು ಸೇರಿದ ಮಗು, ಮಾರಿದ್ದ ತಂದೆ ಜೈಲುಪಾಲು