ಗಂಗಾವತಿ: ವಾಹನ ಡಿಕ್ಕಿಯಾಗಿ ಅಪರಿಚಿತ ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಸಂಗಾಪುರದಲ್ಲಿ ನಡೆದಿದೆ. ಇತ್ತ ರಸ್ತೆಯಲ್ಲಿ ಬಿದ್ದಿದ್ದ ಈ ವ್ಯಕ್ತಿಯ ಮೃತದೇಹ ಕಂಡು ಮತ್ತೊಬ್ಬ ವ್ಯಕ್ತಿ ಕೂಡ ಅಸುನೀಗಿದ್ದಾನೆ. ಮೃತನನ್ನು ಮಲ್ಲಾಪುರ ಗ್ರಾಮದ ಮಂಜುನಾಥ ಕೇಸರಹಟ್ಟಿ (33) ಎಂದು ಗುರುತಿಸಲಾಗಿದೆ.
ಶನಿವಾರ ತಡರಾತ್ರಿ ವಾಹನವೊಂದು ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಅಪರಿಚಿತ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇದೇ ರಸ್ತೆ ಮಾರ್ಗವಾಗಿ ಗಂಗಾವತಿಯಿಂದ ಮಲ್ಲಾಪುರಕ್ಕೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ಮಂಜುನಾಥ, ರಸ್ತೆಯಲ್ಲಿ ಸಂಪೂರ್ಣ ಬೆತ್ತಲಾಗಿ ರಕ್ತಸಿಕ್ತವಾಗಿ ಸಾವನ್ನಪ್ಪಿದ್ದ ವ್ಯಕ್ತಿಯನ್ನು ಕಂಡು ಆಯತಪ್ಪಿ ಬೈಕ್ನಿಂದ ಮೃತ ವ್ಯಕ್ತಿಯ ಮೇಲೆಯೇ ಬಿದ್ದಿದ್ದಾನೆ.
ವಾಹನದಿಂದ ಬಿದ್ದ ರಭಸ ಹಾಗೂ ಮೃತ ವ್ಯಕ್ತಿಯ ಮೇಲೆ ಬಿದ್ದ ಅಘಾತಕ್ಕೆ ತೀವ್ರ ಗಾಯಗೊಂಡು ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.