ಕುಷ್ಟಗಿ(ಕೊಪ್ಪಳ): ಮಹಾರಾಷ್ಟ್ರಕ್ಕೆ ಕೆಲಸ ಅರಸಿ ವಲಸೆ ಹೋಗಿದ್ದ ಕನ್ನಡಿಗರು ರಾಜ್ಯಕ್ಕೆ ಮರಳುತ್ತಿದ್ದು, ವಾಪಸಾಗುತ್ತಿರುವವರ ಪ್ರಮಾಣ ತಗ್ಗುತ್ತಿಲ್ಲ. ಸ್ವಗ್ರಾಮಕ್ಕೆ ಬರುತ್ತಿರುವವರು ತಮ್ಮೊಂದಿಗೆ ಕೊರೊನಾ ಹೊತ್ತು ತರುತ್ತಿದ್ದು, ಇದು ಆತಂಕಕಾರಿ ಬೆಳವಣಿಗೆಯಾಗಿದೆ.
ಕುಷ್ಟಗಿ ತಾಲೂಕಿಗೆ ಮಂಗಳವಾರ ಮಹಾರಾಷ್ಟ್ರದಿಂದ 27 ಮಂದಿ ಹಿಂತಿರುಗಿದ್ದಾರೆ. ಇವರಲ್ಲಿ ಒಬ್ಬ ವ್ಯಕ್ತಿಗೆ ಈಗಾಗಲೇ ಕೊರೊನಾ ಸೋಂಕಿರುವುದು ದೃಢವಾಗಿರುವ ಹಿನ್ನೆಲೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.
ಅಧಿಕಾರಿಗಳು ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ಮಹಾರಾಷ್ಟ್ರದಿಂದ ಬಂದ ಜನರನ್ನು ಆಸ್ಪತ್ರೆಯ ಆವರಣದಲ್ಲಿ ಕೂರಿಸಿ ಥರ್ಮಾಲ್ ಸ್ಕ್ರೀನಿಂಗ್ಗೆ ಒಳಪಡಿಸಿದರು. ಆಸ್ಪತ್ರೆಯಲ್ಲಿ ತಪಾಸಣೆಗೊಳಪಡುವವರನ್ನು ಹೊರತುಪಡಿಸಿ ಉಳಿದೆಲ್ಲರಿಗೂ ಕೆಲ ಹೊತ್ತು ಸಂಚಾರ ನಿರ್ಬಂಧಿಸಲಾಗಿತ್ತು. ನಂತರ ಬಸ್ನಿಂದ ಕೇವಲ ತಲಾ ಐವರನ್ನು ಮಾತ್ರ ಇಳಿಸಿ, ಥರ್ಮಲ್ ಸ್ಕ್ರೀನಿಂಗ್ ಮಾಡಿ ಪುನಃ ಬಸ್ ಹತ್ತಿಸಲಾಯಿತು.