ಗಂಗಾವತಿ : ತಂದೆಯಿಂದಲೇ ಅತ್ಯಾಚಾರಕ್ಕೆ ಒಳಗಾದ ಪ್ರಕರಣದ ಸಂತ್ರಸ್ತ ಬಾಲಕಿ ಹಾಗೂ ಆಕೆಯ ಮಗುವಿನ ಚಿತ್ರವನ್ನು ಟಿಕ್ ಟಾಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ವ್ಯಕ್ತಿಯ ವಿರುದ್ಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಉಡುಮಕಲ್ ಗ್ರಾಮದ ಬಸವರಾಜ ಬೋದೂರು ಎಂಬ ಆರೋಪಿಯ ಮೇಲೆ ಇದೀಗ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ, ಮಕ್ಕಳ ರಕ್ಷಣಾ ಅಧಿಕಾರಿ ಸಿಂಧು ಅಂಗಡಿ ಅವರು ದೂರು ದಾಖಲಿಸಿದ್ದಾರೆ.
![tik tok Video of rape victim and child case registered](https://etvbharatimages.akamaized.net/etvbharat/prod-images/kn-gvt-05-02-minors-victims-vidio-iiligely-in-tiktok-fir-vis-kac10005_02072020191622_0207f_1593697582_277.jpg)
ಪ್ರಕರಣದ ಹಿನ್ನೆಲೆ
ತಂದೆಯಿಂದಲೇ ಅಪ್ರಾಪ್ತ ವಯಸ್ಸಿನ ಯುವತಿ ಗರ್ಭಿಣಿಯಾದ ಪ್ರಕರಣವೊಂದು ತಾಲೂಕಿನಲ್ಲಿ ಇತ್ತೀಚೆಗೆ ಪತ್ತೆಯಾಗಿತ್ತು. ಅಪ್ರಾಪ್ತ ಬಾಲಕಿ ಹಾಗೂ ಆಕೆಗೆ ಜನಿಸಿದ ಮಗುವಿನ ಚಿತ್ರವನ್ನು ಈ ಆರೋಪಿ ಸಂಗ್ರಹಿಸಿ ಟಿಕ್ ಟಾಕ್ ಆಪ್ ನಲ್ಲಿ ವಿಡಿಯೋ ಮಾಡಿ ವಾಟ್ಸ್ ಆಪ್ನಲ್ಲಿ ಹರಿಯಬಿಟ್ಟಿದ್ದ. ಈ ಪ್ರಕರಣವನ್ನು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ನೀಲೋಫರ್ ರಾಂಪುರೆ ಹಾಗೂ ಸಮಾಲೋಚಕಿ ನೇತ್ರಾವತಿ ಗಮನಿಸಿ, ಮಕ್ಕಳ ಭವಿಷ್ಯ ಹಾಗೂ ಘನತೆಗೆ ಧಕ್ಕೆ ಉಂಟಾಗುವ ಪ್ರಕರಣ ಎಂದು ಪರಿಗಣಿಸಿ ದೂರು ನೀಡಲು ಮಕ್ಕಳ ಕಲ್ಯಾಣ ಸಮಿತಿಗೆ ಸೂಚನೆ ನೀಡಿದ್ದರು.
ಈ ಹಿನ್ನೆಲೆ ಆರೋಪಿ ವಿರುದ್ಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಅಪ್ರಾಪ್ತ ಬಾಲಕಿ ಮತ್ತು ಆಕೆಗೆ ಜನಿಸಿ ಮಗು ಕಾನೂನು ರಕ್ಷಣೆ ಮತ್ತು ಫೋಷಣೆಯಲ್ಲಿರುವ ಸಂದರ್ಭದಲ್ಲಿ ವಿಡಿಯೋ, ಫೊಟೋ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿರುವುದು ಅಪರಾಧ ಎಂದು ಉಲ್ಲೇಖಿಸಿ ದೂರು ದಾಖಲಿಸಲಾಗಿದೆ.