ಕುಷ್ಟಗಿ/ಕೊಪ್ಪಳ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತರಲಕಟ್ಟಿ ಗ್ರಾಮದ ಒಂದೇ ಕುಟುಂಬದ ಮೂವರು ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಗಳಿಸುವ ಮೂಲಕ ಮಾದರಿಯಾಗಿದ್ದಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತರಲಕಟ್ಟಿಯ ರೈತ ಗುರುನಾಥಪ್ಪ ಮೇಟಿ ಅವರ ಪುತ್ರಿಯರಾದ ಪ್ರಮೀಳಾ, ಸಾವಿತ್ರಿ ಹಾಗೂ ಪುತ್ರ ಮಂಜುನಾಥ ಅವರ ಕನ್ನಡ ವಿಷಯದ ಬಗ್ಗೆಯ ಒಲವನ್ನು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳಿಂದ ನೋಡಬಹುದು.
2016-17 ನೇ ಸಾಲಿನಲ್ಲಿ ಪ್ರಮೀಳಾ ಮೇಟಿ ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕ ಪಡೆದು ಶೇ 88 ಸಾಧನೆ ಮಾಡಿದ್ದಳು. 2018-19 ನೇ ಸಾಲಿನಲ್ಲಿ ಸಾವಿತ್ರಿ, ಕನ್ನಡ ವಿಷಯದಲ್ಲಿ 125 ಕ್ಕೆ 124 ಪಡೆದು ಶೇ 90 ರಷ್ಟು ಫಲಿತಾಂಶ ಪಡೆದು ಗುರುತಿಸಿಕೊಂಡಿದ್ದಳು. ಪ್ರಸಕ್ತ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕಿರಿಯ ಸಹೋದರ ಮಂಜುನಾಥ್, ತಾನೇನು ಕಡಿಮೆ ಇಲ್ಲ ಎನ್ನುವಂತೆ ಅಕ್ಕಂದಿರ ಫಲಿತಾಂಶ ಮೀರಿಸಿ ಶೇ 93.76 ಪಡೆಯುವ ಜೊತೆಗೆ ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕಗಳನ್ನು ಪಡೆದುಕೊಂಡಿದ್ದಾನೆ.