ಕೊಪ್ಪಳ: ಜಿಲ್ಲೆಯ 6ಕ್ಕೂ ಹೆಚ್ಚು ಕೇಂದ್ರಗಳಲ್ಲಿ ನಾಳೆ (ಜನವರಿ 8) ಕೊರೊನಾ ವ್ಯಾಕ್ಸಿನ್ ಡ್ರೈ ರನ್ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜ ಹೇಳಿದರು.
ಈ ಕುರಿತು ಮಾಹಿತಿ ನೀಡಿದ ಅವರು, ಸರ್ಕಾರದ ಸೂಚನೆ ಹಿನ್ನೆಲೆ ವ್ಯಾಕ್ಸಿನ್ ಡ್ರೈ ರನ್ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ಡ್ರೈ ರನ್ ನಡೆಸಲು ಯೋಚಿಸಲಾಗಿತ್ತು. ಅಂತಿಮವಾಗಿ ಸುಮಾರು 6ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ನಾಳೆ 2 ಗಂಟೆಗಳ ಕಾಲ ಡ್ರೈ ರನ್ ನಡೆಯಲಿದೆ ಎಂದು ತಿಳಿಸಿದರು.
ನಗರದ ಜಿಲ್ಲಾಸ್ಪತ್ರೆ, ಶ್ರೀ ಗವಿಸಿದ್ದೇಶ್ವರ ಆಯುರ್ವೇದಿಕ್ ಆಸ್ಪತ್ರೆ, ಇರಕಲ್ಗಡಾ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಜಿಲ್ಲೆಯ 6ಕ್ಕೂ ಹೆಚ್ಚು ಕಡೆ ವ್ಯಾಕ್ಸಿನ್ ಡ್ರೈ ರನ್ ನಡೆಯಲಿದೆ. 25 ಆರೋಗ್ಯ ಕಾರ್ಯಕರ್ತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ ಒಟ್ಟು 3 ಕೊಠಡಿಗಳಿರುತ್ತವೆ. ಒಂದು ನಿರೀಕ್ಷಣಾ ಕೊಠಡಿ (ವೇಟಿಂಗ್ ರೂಮ್), ಇಮ್ಯುನೊಜೆನ್ ರೂಮ್ ಹಾಗೂ ಅಬ್ಸರ್ವೇಷನ್ ರೂಮ್ಗಳಿರುತ್ತವೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ಲಸಿಕೆಗಾಗಿ ಆರೋಗ್ಯ ಕಾರ್ಯಕರ್ತರ, ಫ್ರಂಟ್ ಲೈನ್ ವರ್ಕರ್ಸ್ ಪಟ್ಟಿ ಮಾಡಲಾಗಿದೆ. ಒಟ್ಟು 10,335 ಜನರ ಮಾಹಿತಿಯನ್ನು ಕೋವಿಡ್ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ನಮ್ಮಲ್ಲಿ ಐಎಲ್ಆರ್ ಸಮಸ್ಯೆ ಇಲ್ಲ ಹಾಗೂ ಲಸಿಕೆ ಸಂಗ್ರಹಕ್ಕೂ ಯಾವುದೇ ತೊಂದರೆ ಇಲ್ಲ ಎಂದು ಡಿಹೆಚ್ಒ ಡಾ. ಲಿಂಗರಾಜ ಹೇಳಿದರು.