ಕುಷ್ಟಗಿ(ಕೊಪ್ಪಳ): ತಾಲೂಕಿನ ನೀರಲೂಟಿ ತೋಟಗಾರಿಕಾ ಇಲಾಖೆಯ 40 ಎಕರೆ ವಿಸ್ತೀರ್ಣದ ಸಸ್ಯ ಕ್ಷೇತ್ರ ಇದೀಗ ನೀರಿನ ಅಭಾವದಿಂದ ತತ್ತರಿಸಿದೆ.
ಈ ಬಗ್ಗೆ ಮಾತನಾಡಿದ ತೋಟಗಾರಿಕಾ ಇಲಾಖೆ ಹಿರಿಯ ನಿರ್ದೇಶಕ ಕೆ.ಎಂ.ರಮೇಶ್, ನೀರಲೂಟಿ ತೋಟಗಾರಿಕಾ ಕ್ಷೇತ್ರ ಸುಮಾರು 42 ಎಕರೆಯಷ್ಟು ವ್ಯಾಪ್ತಿಯಿದೆ. ಸಸ್ಯ ಕ್ಷೇತ್ರದ ಪಕ್ಕದಲ್ಲಿಯೇ ಕೆರೆ ಇದ್ದರೂ ಅದನ್ನು ಬಳಸುವಂತಿಲ್ಲ. ಕಾರಣ ಇದು ಲವಣಾಂಶದಿಂದ ಕೂಡಿದೆ. ಹೀಗಾಗಿ ಕಳೆದ ಮೂರು ವರ್ಷಗಳಲ್ಲಿ ಸುಮಾರು 6ಕ್ಕೂ ಹೆಚ್ಚು ಬೋರ್ವೆಲ್ಗಳನ್ನು ಕೊರೆಸಿದ್ದೇವೆ ಎಂದು ತಿಳಿಸಿದರು.
ನಂತರ ಮಾತನಾಡಿದ ಅವರು, ಕೊರೆಸಿರುವ ಬೋರ್ವೆಲ್ಗಳಲ್ಲಿ ಕೇವಲ ಎರಡರಲ್ಲಿ ಮಾತ್ರ ನೀರು ಸಿಗುತ್ತಿರುವುದರಿಂದ ಬೇಸಿಗೆಯಲ್ಲಿ ಸಸ್ಯ ಸಂರಕ್ಷಣೆ ತುಂಬಾ ಕಷ್ಟ. ಅಲ್ಲದೆ ಪಕ್ಕದಲ್ಲಿರುವ ಕೆರೆಯ ನೀರನ್ನು ಬಳಸೋಣವೆಂದರೆ ಅದು ಲವಣಯುಕ್ತವಾಗಿದ್ದು, ಸಸಿಗಳ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ವಿವರಿಸಿದರು.
ಅಲ್ಲದೆ ಈ ತೋಟಗಾರಿಕಾ ಕ್ಷೇತ್ರದಲ್ಲಿ ಎಲ್ಲಿಯೇ ಕೊಳವೆ ಬಾವಿ ಹಾಕಿಸಿದರೂ ನೀರಿನ ಲಭ್ಯತೆ ಇಲ್ಲ. ಅಂತರ್ಜಲ ಸಿಕ್ಕರೂ ಕೆಲವೇ ದಿನಗಳಲ್ಲಿ ಬತ್ತಿ ಹೋಗುತ್ತದೆ. ಈ ಹಿನ್ನೆಲೆಯಲ್ಲಿ ಸಸ್ಯಗಳನ್ನು ಉಳಿಸಿಕೊಳ್ಳುವುದು ನಿಜಕ್ಕೂ ಸವಾಲಾಗಿದೆ ಎಂದರು.