ಕೊಪ್ಪಳ: ಜಿಲ್ಲೆಯಲ್ಲಿ ಸದ್ಯಕ್ಕೆ ಆಕ್ಸಿಜನ್ ಸಮಸ್ಯೆ ಇಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಈಗ 230 ಬೆಡ್‍ಗಳಿದ್ದು, ಜಿಲ್ಲಾಸ್ಪತ್ರೆಯಲ್ಲಿ ಶೇಕಡಾ 95 ರಷ್ಟು ಭರ್ತಿಯಾಗಿವೆ. ಹೆಚ್ಚುವರಿ ಬೆಡ್‍ಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಮಾಹಿತಿ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರತಿನಿತ್ಯ 110 ಟನ್ ಆಕ್ಸಿಜನ್ ಉತ್ಪಾದನೆಯಾಗುತ್ತದೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಾಗದಂತೆ ನೋಡಿಕೊಳ್ಳಲು ತಂಡ ರಚಿಸಲಾಗಿದೆ. ಜಿಲ್ಲೆಯಲ್ಲಿ ಕೇವಲ ಮೂರು ತಾಸಿನ ಅವಧಿಯಲ್ಲಿ ಆಕ್ಸಿಜನ್ ಪೂರೈಕೆಯಾಗುವ ಮಟ್ಟದಲ್ಲಿ ಆಕ್ಸಿಜನ್ ಉತ್ಪಾದನೆಯಾಗುತ್ತಿದೆ. ಹೀಗಾಗಿ ಆಕ್ಸಿಜನ್ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಹೆಚ್ಚವರಿ ಆಕ್ಸಿಜನ್ ಬೆಡ್ ಮಾಡಲು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಎಸಿಎಸ್ ಹೆಲ್ತ್ ಅವರ ಗಮನಕ್ಕೆ ತಂದು ಮಾಡಬೇಕು. ಏಕೆಂದರೆ ಆಕ್ಸಿಜನ್ ಇಡೀ ರಾಜ್ಯಕ್ಕೆ ಪೂರೈಕೆ ಆಗಬೇಕು. ಹೀಗಾಗಿ ಅದರಲ್ಲಿ ನಮ್ಮ ಜಿಲ್ಲೆಯೂ ಒಂದು. 150 ಆಕ್ಸಿಜನ್ ಸಪ್ಲೈ ಬೆಡ್ ಸಜ್ಜುಗೊಳಿಸಲು ಅವರು ನಿರ್ದೇಶನ ನೀಡಿದ್ದಾರೆ. ಆ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಗಂಗಾವತಿ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಸ್ಥಳಾವಕಾಶವಿರುವುದರಿಂದ ಅಲ್ಲಿಯೂ ಆಕ್ಸಿಜನ್, ಬೆಡ್‍ಗಳನ್ನು ರೆಡಿ ಮಾಡಲು ಚಿಂತನೆ ನಡೆದಿದೆ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಈಗ ಸದ್ಯಕ್ಕೆ 230 ಬೆಡ್‍ಗಳಿವೆ. ಖಾಸಗಿ ಆಸ್ಪತ್ರೆಯಲ್ಲಿ 137 ಬೆಡ್‍ಗಳಿದ್ದು, ಆ ಪೈಕಿ 128 ಭರ್ತಿಯಾಗಿವೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಇನ್ನೂ ಹೆಚ್ಚಿನ ಬೆಡ್‍ಗಳನ್ನು ರೆಡಿ ಮಾಡಲಾಗುತ್ತಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಸಂಖ್ಯೆ ಒಟ್ಟು 350 ಆಗಲಿದೆ. ನಿನ್ನೆ ಕೋವಿಡ್ ವಾರ್ಡ್‍ನಲ್ಲಿ ವೆಂಟಿಲೇಟರ್ ಗಳಿಗೆ ಯಾವುದೇ ತೊಂದರೆಯಾಗಿಲ್ಲ. ಅಲ್ಲಿ ಯಾವುದೇ ಸಮಸ್ಯೆ ಇಲ್ಲ. ನಾನೂ ಸಹ ತಜ್ಞರಿಂದ ಮಾಹಿತಿ ಪಡೆದುಕೊಂಡಿದ್ದೇನೆ ಎಂದರು.
ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 50 ವೆಂಟಿಲೇಟರ್ಗಳಿವೆ. ಅದರಲ್ಲಿ 16 ವೆಂಟಿಲೇಟರ್ ಜಿಲ್ಲಾಸ್ಪತ್ರೆಯಲ್ಲಿ ಪೇಷೆಂಟ್‍ಗಳಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 31 ಸೋಂಕಿತರು ವೆಂಟಿಲೇಟರ್ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರ ಹೋಂ ಐಸೋಲೇಷನ್‍ಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಒಂದು ವೇಳೆ ಹೋಂ ಐಸೋಲೇಷನ್‍ಗೆ ಅನುಕೂಲವಿಲ್ಲದಿದ್ದರೆ ಕೋವಿಡ್ ಕೇರ್ ಸೆಂಟರ್ಗೆ ಬಂದು ಚಿಕಿತ್ಸೆ ಪಡೆದುಕೊಳ್ಳಬೇಕು. ಈಗ ಖಾಸಗಿಯವರು ಕೋವಿಡ್ ಕೇರ್ ಸೆಂಟರ್ಗೆ ಸ್ಥಳ ನೀಡಲು ಮುಂದೆ ಬಂದಿದ್ದಾರೆ. ಸದ್ಯಕ್ಕೆ ಅದನ್ನು ಸ್ಥಗಿತ ಮಾಡಲಾಗಿದೆ. ರೋಗ ಲಕ್ಷಣಗಳಿದ್ದರೂ ಆರ್ಟಿಪಿಸಿಆರ್ನಲ್ಲಿ ನೆಗೆಟಿವ್ ಬಂದರೆ ನಿರ್ಲಕ್ಷ್ಯ ಮಾಡಬಾರದು. ಸ್ಕ್ಯಾನ್ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.
ಜಿಲ್ಲೆಯಲ್ಲಿ ಕೊರೊನಾ ಕರ್ಫ್ಯೂ ನಿಯಮಗಳನ್ನು ಸರಿಯಾಗಿ ಅನುಷ್ಠಾನ ಮಾಡಲಾಗುತ್ತಿದೆ. ನಿಯಮಗಳನ್ನು ಉಲ್ಲಂಘಿಸಿದವರ ಮೇಲೆ ಎಫ್‍ಐಆರ್ ಹಾಕಲಾಗಿದೆ ಎಂದ ಅವರು, ಜನರು ದಯವಿಟ್ಟು ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಓದಿ: ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣದಲ್ಲಿ ಇದುವರೆಗೂ ನಾಲ್ವರ ಬಂಧನ: ಕಮಲ್ ಪಂತ್