ಕುಷ್ಟಗಿ (ಕೊಪ್ಪಳ): ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಕಳೆದ ಹತ್ತು ದಿನಗಳಲ್ಲಿ ಜಾಸ್ತಿಯಾಗಿವೆ. ಬೇರೆ ಜಿಲ್ಲೆಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಪ್ರಮಾಣ ಕಡಿಮೆ ಇದೆ ಎಂದು ಕೋವಿಡ್ ಲಸಿಕಾ ಅಭಿಯಾನದ ಕುಷ್ಟಗಿ ನೋಡಲ್ ಅಧಿಕಾರಿ ಡಾ. ಮಹೇಶ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾರದ ಹಿಂದೆ ನಮ್ಮ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಶೇ.0.1ರಷ್ಟಿತ್ತು. ಇದೀಗ ಶೇ.0.2 ರಷ್ಟಿದೆ. ರಾಜ್ಯದಲ್ಲಿ ಶೇ.0.9 ರಷ್ಟಿದೆ. ಆದರೂ ನಾವು ಎಚ್ಚೆತ್ತುಕೊಳ್ಳುವ ಅಗತ್ಯವಿದೆ. ಎಲ್ಲ ವೃದ್ಧರು, ಅಸ್ವಸ್ಥ ರೋಗಿಗಳನ್ನು ಅಭಿಯಾನದಲ್ಲಿ ಸಂಪರ್ಕಿಸಿ ಕೋವಿಶೀಲ್ಡ್ ಲಸಿಕೆ ಹಾಕಲಾಗುತ್ತಿದೆ.
ಇದನ್ನೂ ಓದಿ: ಸಾರ್ವಜನಿಕ ಶೌಚಾಲಯವನ್ನೇ ಶಯನ ಗೃಹವಾಗಿಸಿಕೊಂಡ ಭೂಪ
ಈ ಲಸಿಕೆಗಾಗಿ ಕುಷ್ಟಗಿ ತಾಲೂಕಿನಲ್ಲಿ ಯಾವುದೇ ಖಾಸಗಿ ಆಸ್ಪತ್ರೆಯನ್ನು ಗುರುತಿಸಿಲ್ಲ. ತಾಲೂಕಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಪಡೆಯಬಹುದು. ಲಸಿಕೆ ಹಾಕಿಸಿಕೊಂಡ ಬಳಿಕ ಕೋವಿಡ್ ಸೋಂಕು ಬರುವುದಿಲ್ಲ ಎನ್ನುವುದು ತಪ್ಪು ಗ್ರಹಿಕೆ. ಆದರೆ ಅದರ ತೀವ್ರತೆ ಕಡಿಮೆಯಾಗಲಿದೆ ಎಂದು ಅವರು ಹೇಳಿದರು.