ಗಂಗಾವತಿ(ಕೊಪ್ಪಳ): ಖಾಸಗಿ ಬ್ಯಾಂಕ್ಗೆ ಕನ್ನ ಹಾಕುವ ಉದ್ದೇಶದಿಂದ ಸಲಕರಣೆ ಸಮೇತ ಆಗಮಿಸಿದ್ದ ಕಳ್ಳರು, ವ್ಯಕ್ತಿಯೊಬ್ಬರನ್ನು ನೋಡಿ ಪರಾರಿಯಾಗಿರುವ ಘಟನೆ ಕಾರಟಗಿ ತಾಲೂಕಿನ ಮರಲಾನಹಳ್ಳಿಯಲ್ಲಿ ನಡೆದಿದೆ. ರಾತ್ರಿ ವೇಳೆ ಅನುಮಾನದಿಂದ ವ್ಯಕ್ತಿಯೊಬ್ಬರು ಜೋರಾಗಿ ಕೂಗಿ ಚಾಣಾಕ್ಷತನ ಮೆರೆದಿದ್ದರಿಂದ ಬ್ಯಾಂಕ್‌ನಲ್ಲಿದ್ದ ನಗದು, ಆಭರಣ ಹಾಗು ಸೇಫ್ ಲಾಕರ್‌ನಲ್ಲಿರುವ ಕಾಗದ ಪತ್ರಗಳು ಸುರಕ್ಷಿತವಾಗಿವೆ.
![Marlanahalli Axis Bank Koppal dist ಆಕ್ಸಿಸ್ ಬ್ಯಾಂಕ್ಗೆ ಖನ್ನ ಕಳ್ಳರು ಪರಾರಿ](https://etvbharatimages.akamaized.net/etvbharat/prod-images/28-12-2023/20370202_ssefdfdfd.jpg)
ನಾಲ್ಕೈದು ಜನರ ತಂಡ ಕಟಿಂಗ್ ಮಷಿನ್, ಕಟಿಂಗ್ ಪ್ಲೇಯರ್, ಜಿಯೋ ಕಂಪನಿಯ ಡೊಂಗಲ್, ಕರೆಂಟ್ ವೈಯರ್ ಸಹಿತ ಸ್ಥಳಕ್ಕೆ ಆಗಮಿಸಿದ್ದರು. ಕಟಿಂಗ್ ಮಷಿನ್ ಮೂಲಕ ಬ್ಯಾಂಕಿನ ಬಾಗಿಲು ಕೊರೆಯಲು ಯತ್ನಿಸಿದ್ದಾರೆ. ಬ್ಯಾಂಕ್ ಪಕ್ಕದ ಕಟ್ಟಡದಲ್ಲಿ ವಾಸಿಸುತ್ತಿರುವ ಮದನ್ ಎಂಬವರಿಗೆ ಮಧ್ಯರಾತ್ರಿ ಬ್ಯಾಂಕಿನ ಆವರಣದಲ್ಲಿ ಸದ್ದು ಆಗುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣ ಮನೆಯ ಲೈಟ್ ಹಾಕಿ ಗಮನಿಸಿ, ಜೋರಾಗಿ ಕೂಗಿದ್ದಾರೆ. ಅಷ್ಟೊತ್ತಿಗೆ ಕಳ್ಳರು ತಾವು ತಂದ ವಸ್ತುಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಮದನ ಅವರು ತೋರಿದ ಚಾಣಾಕ್ಷತನಕ್ಕೆ ಬ್ಯಾಂಕ್ ಸಿಬ್ಬಂದಿ, ಗ್ರಾಮಸ್ಥರು ಶ್ಲಾಘಿಸಿದ್ದಾರೆ. ಕಾರಟಗಿ ಠಾಣೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಪ್ರಕಾಶ ವಾಲೆ ದೂರು ದಾಖಲಿಸಿದ್ದಾರೆ. ಕಳ್ಳರು ಬಿಟ್ಟು ಹೋಗಿರುವ ವಸ್ತುಗಳ ಜಾಡು ಹಿಡಿದು ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ಕಿಡಿಗೇಡಿಗಳಿಂದ ಅಡಿಕೆ ಗಿಡಗಳ ನಾಶ: ರೈತರೊಬ್ಬರ ತೋಟಕ್ಕೆ ನುಗ್ಗಿದ ದುಷ್ಕರ್ಮಿಗಳು 1,500ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಮನಬಂದಂತೆ ಕೊಚ್ಚಿ ಹಾಕಿದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಮುಕ್ತೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪರಮೇಶಪ್ಪ-ನಾಗಮ್ಮ ದಂಪತಿ ಎರಡು ಎಕರೆ ಜಮೀನಿನಲ್ಲಿ ಸುಮಾರು ಎರಡು ವರ್ಷದಿಂದ ಒಂದೂವರೆ ಸಾವಿರಕ್ಕೂ ಅಧಿಕ ಅಡಿಕೆ ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದರು. ಉತ್ತಮ ದರ ಸಿಗುತ್ತಿದೆ ಎಂದು ಭತ್ತದ ಬದಲು ಅಡಿಕೆ ಬೆಳೆದಿದ್ದರು. ಇನ್ನೆರಡು ವರ್ಷಗಳಾಗುತ್ತಿದ್ದರೆ ಫಸಲು ಬರುತ್ತಿತ್ತು. ಆದರೆ ಕಿಡಿಗೇಡಿಗಳ ಅಟ್ಟಹಾಸಕ್ಕೆ ಅಷ್ಟೂ ಗಿಡಗಳು ನಾಶವಾಗಿವೆ. ರೈತ ಕುಟುಂಬ ಕಣ್ಣೀರು ಹಾಕುತ್ತಿದೆ.
ಇದನ್ನೂಓದಿ: ರಾಮನಗರದಲ್ಲಿ ಅಮಾನುಷ ಕೃತ್ಯ: ಸರಪಳಿ ಕಟ್ಟಿ ಕಾರ್ಮಿಕನಿಂದ ಕೆಲಸ ಮಾಡಿಸಿಕೊಂಡ ಆರೋಪ