ಗಂಗಾವತಿ: ಕೊರೊನಾ ಸೋಂಕಿಗೆ ಒಳಗಾಗಿದ್ದ ಸಂದರ್ಭದಲ್ಲಿ ನೈತಿಕ ಬೆಂಬಲದ ಜೊತೆ ಆಸ್ಪತ್ರೆಯ ಸಿಬ್ಬಂದಿ ಸಹಕಾರ ನೀಡಿದ್ದನ್ನು ಸ್ಮರಿಸಿ ಗುಣಮುಖವಾದ ಮಹಿಳೆಯೊಬ್ಬರು ಇಲ್ಲಿನ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿ ಪತ್ರ ಬರೆದಿದ್ದಾರೆ.
ಇಲ್ಲಿನ ಉಪ ವಿಭಾಗ ಆಸ್ಪತ್ರೆಯ ನರ್ಸ್ ಒಬ್ಬರಿಗೆ ಕಳೆದ ವಾರ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ, ಕೊಪ್ಪಳದ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಸೋಂಕಿತೆಗೆ ನಾಲ್ಕು ತಿಂಗಳ ಮಗು ಇರುವ ಕಾರಣಕ್ಕೆ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಗಂಗಾವತಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನೇ ಕ್ವಾರಂಟೈನ್ ಕೇಂದ್ರವನ್ನಾಗಿ ಬದಲಿಸಿ ಇಲ್ಲಿಗೆ ಕರೆತಂದು ಚಿಕಿತ್ಸೆ ನೀಡಲಾಗಿತ್ತು.
ಈಗ ಸೋಂಕಿತ ಮಹಿಳೆ ಸಂಪೂರ್ಣ ಗುಣಮುಖರಾಗಿದ್ದು, ಇಡೀ ಆಸ್ಪತ್ರೆಯ ಸಿಬ್ಬಂದಿ ಸಂದಿಗ್ಧ ಪರಿಸ್ಥಿತಿಯಲ್ಲಿ ಉತ್ತಮವಾಗಿ ಸ್ಪಂದಿಸಿ ಬೆಂಬಲ ನೀಡಿದ್ದೀರಿ. ನನಗೆ ಮಾನಸಿಕವಾಗಿ ಧೈರ್ಯ ತುಂಬಿದ್ದೀರಿ ಎಂದು ಸ್ಮರಿಸಿ ನರ್ಸ್ ಮತ್ತು ಆಸ್ಪತ್ರೆಯ ಸಿಬ್ಬಂದಿ ಉದ್ದೇಶಿಸಿ ಪತ್ರ ಬರೆದು ಕೃತಜ್ಞತೆ ಅರ್ಪಿಸಿದ್ದಾರೆ.