ಕೊಪ್ಪಳ: ಮಾರ್ಚ್ 19 ರಂದು ಧಾರವಾಡದ ಕೊರೊನಾ ಸೋಂಕಿತ ಪಿ.194 ಪ್ರಯಾಣಿಸಿದ್ದ ಖಾಸಗಿ ಬಸ್ ನಲ್ಲಿಯೇ ಪ್ರಯಾಣಿಸಿ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮಹಿಳೆ ಕೊಪ್ಪಳದಲ್ಲಿ ಪತ್ತೆಯಾಗಿದ್ದಾಳೆ.
ಈಗ ಆ ಮಹಿಳೆಯನ್ನು ಐಸೋಲೇಷನ್ ಕ್ವಾರಂಟೈನ್ ನಲ್ಲಿಡಲಾಗಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು, ಧಾರವಾಡದ ಕೊರೊನಾ ಸೋಂಕಿತ ವ್ಯಕ್ತಿ (P194) ವಿಆರ್ ಎಲ್ ಬಸ್ ಮೂಲಕ ಮಾರ್ಚ್ 19 ರಂದು ಬಾಂಬೆಯಿಂದ ಹುಬ್ಬಳ್ಳಿಗೆ ಪ್ರಯಾಣಿಸಿದ್ದ. ಇದೇ ಬಸ್ ನಲ್ಲಿ ಸೀಟ್ ನಂಬರ್. 11 ರಲ್ಲಿ 29 ವರ್ಷದ ಈ ಶಿಖಾಶೇಖ್ ಎಂಬ ಮಹಿಳೆಯೂ ಪ್ರಯಾಣಿಸಿದ್ದಳು.
ಧಾರವಾಡ ಜಿಲ್ಲಾಡಳಿತವೂ ಈಕೆಯ ಪತ್ತೆ ಕಾರ್ಯ ನಡೆಸಿತ್ತು. ಆದರೆ, ಈ ಮಹಿಳೆ ಮಾರ್ಚ್ 20 ರಿಂದ ಹುಬ್ಬಳ್ಳಿಯಲ್ಲಿ ಪರಿಚಯಸ್ಥರ ಮನೆಯಲ್ಲಿದ್ದು, ಏಪ್ರಿಲ್ 13 ರಂದು ಸಂಜೆ 5.30 ಗಂಟೆಗೆ ಹುಬ್ಬಳ್ಳಿಯಿಂದ ಸ್ಕೂಟಿ ಸಮೇತ ಹಾಲಿನಗಾಡಿ ಮೂಲಕ ರಾತ್ರಿ 8.30ರ ಸುಮಾರಿಗೆ ಕೊಪ್ಪಳಕ್ಕೆ ಬಂದಿದ್ದಾಳೆ. ಬಳಿಕ ಭಾಗ್ಯನಗರದ ಕದಂಬ ಬಡಾವಣೆಯ ಶಾಂತಾರಾಮ್ ಎಂಬುವವರ ಮನೆಯಲ್ಲಿ ವಾಸ್ತವ್ಯ ಮಾಡಿದ್ದಾಳೆ. ಭಾಗ್ಯನಗರದ ಗುರುಬಸವರಾಜ ಹೊಳಗುಂದಿ ಎಂಬಾತ ಈ ಮಹಿಳೆಯನ್ನು ಬಾಂಬೆಗೆ ಕಳಿಸಲು ಪಾಸ್ ಪಡೆಯುವುದಕ್ಕೆ ಪೊಲೀಸ್ ಕಚೇರಿಗೆ ಏಪ್ರಿಲ್ 14 ಕರೆದುಕೊಂಡು ಹೋಗಿದ್ದಾನೆ.
ಈಕೆ ಪಿ.194ರ ಪ್ರಾಥಮಿಕ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ ಮಹಿಳೆಯನ್ನು ಹಾಗೂ ಆಕೆಯ ವಾಸ್ತವ್ಯ ಮಾಡಿದ್ದ ಭಾಗ್ಯನಗರದ ಶಾಂತಾರಾಮ್ ಎಂಬುವವರ ಕುಟುಂಬವನ್ನು ಐಸೋಲೇಷನ್ ಕ್ವಾರಂಟೈನ್ ಮಾಡಲಾಗಿದೆ. ಇನ್ನು ಮಹಿಳೆಯನ್ನು ಕರೆತಂದ ಗುರುಬಸವರಾಜ ಹೊಳಗುಂದಿಯನ್ನು ಕ್ವಾರಂಟೈನ್ ಮಾಡಲು ಹೋದಾಗ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಅನುಮತಿ ಪಡೆಯದೇ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮಹಿಳೆಯನ್ನು ಕೊಪ್ಪಳಕ್ಕೆ ಕರೆತಂದಿರುವುದು ಅಪರಾಧವಾಗಿದ್ದು, ಗುರುಬಸವರಾಜ ಹೊಳಗುಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ತಹಶೀಲ್ದಾರ್‘ಗೆ ಜಿಲ್ಲಾಧಿಕಾರಿ ಪಿ. ಸುನೀಲ್ಕುಮಾರ್ ಸೂಚಿಸಿದ್ದಾರೆ.