ಕುಷ್ಟಗಿ (ಕೊಪ್ಪಳ): ಕಳೆದ 25 ವರ್ಷಗಳಿಂದ ಹೆಗಲಿಗೆ ಹೆಗಲುಕೊಟ್ಟು ದುಡಿದ ಕಾರ್ಮಿಕ, ಶ್ರಮಿಕರಿಗೆ ಕುಷ್ಟಗಿ ಮಹಾವೀರ ಸಾ ಮಿಲ್ ಮಾಲೀಕ ಶಾಂತರಾಜ್ ಗೋಗಿ ಅವರು, ತಮ್ಮ ಮಕ್ಕಳ ಮದುವೆ ಸಮಾರಂಭದ ಹಿನ್ನೆಲೆ ಕಾರ್ಮಿಕ ದಂಪತಿಗೆ ಒಂದೂವರೆ ತೊಲ ಚಿನ್ನದ ಉಂಗುರ ತೊಡಿಸಿ ಗೌರವಿಸಿ ಸಂಭ್ರಮಿಸಿದರು.
ಜ.6ರಂದು ನೆರವೇರಲಿರುವ ಶಾಂತರಾಜ್-ಅನಿತಾ ಗೋಗಿ ಪುತ್ರರಾದ ಶ್ರೇಣಿಕ್, ಸುಮಿತ್ ಅವರ ಮದುವೆ ಸಮಾರಂಭದ ಪ್ರಯುಕ್ತ ಜ.4ರಂದು ಸಂಜೆ ಮಹಾವೀರ ಸಾ ಮಿಲ್ ಕಾರ್ಮಿಕರಾದ ಯಮನೂರಸಾಬ್- ಖಾದರಬಿ, ಗ್ಯಾನಪ್ಪ ಪಾಟೀಲ- ರೇಣುಕಾ, ದೇವಪ್ಪ ಮೇಸ್ತ್ರಿ- ಹನುಮವ್ವ, ರಹೀಮಾಮಸಾಬ್ ಬಸಾಪೂರ- ಖಾಸೀಂಬಿ ಈ ನಾಲ್ವರು ಕಾರ್ಮಿಕ ದಂಪತಿಗೆ ಮಹಾವೀರ ಸಾ ಮಿಲ್ ಮಾಲೀಕ ಶಾಂತರಾಜ್ ಗೋಗಿ-ಅನಿತಾ ಕುಟುಂಬದವರೆಲ್ಲರೂ ಸೇರಿ ಪೇಟಾದೊಂದಿಗೆ ಸನ್ಮಾನಿಸಿ, ಹೊಸ ಬಟ್ಟೆ ನೀಡುವ ಜೊತೆಯಲ್ಲಿ ಕಾರ್ಮಿಕರಿಗೆ ತಲಾ ಒಂದೂವರೆ ತೊಲ ಚಿನ್ನದ ಉಂಗುರು ತೊಡಿಸಿ ಸಂಭ್ರಮಿಸಿದರು.
ಈ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಶಾಂತರಾಜ್ ಗೋಗಿ ಅವರು, ನಮ್ಮ ಕಾರ್ಮಿಕರು ನಮ್ಮ ಕುಟುಂಬದ ಭಾಗ, ಅವರ ಕೆಲಸದಿಂದ ಲಕ್ಷಾಂತರ ಆದಾಯ ಸಾಧ್ಯವಾಗಿದೆ. ಅವರಿಲ್ಲದೇ ಉದ್ಯಮ ನಡೆಸುವುದು ಕಷ್ಟಸಾಧ್ಯವಿದೆ. ಲಾಕ್ಡೌನ್ ಸಂದರ್ಭದಲ್ಲಿ ಕಾರ್ಮಿಕರು ಕೈ ಕೊಡದೇ ನನ್ನೊಂದಿಗೆ ಲಾಭ ನಷ್ಟ, ಸುಖ ದುಃಖದಲ್ಲಿ ಸಮಾಭಾಗಿಗಳಾಗಿ ಕೆಲಸ ನಿರ್ವಹಿಸಿದ್ದಾರೆ.
ಈ ಕಾರ್ಮಿಕರು ನನಗೆ ಕೋಟಿ ರೂ. ಸಮಾನ. ನಮ್ಮ ಮಕ್ಕಳ ಮದುವೆ ಕಾರ್ಯಕ್ರಮದಲ್ಲಿ ಅವರನ್ನು ಸಂಭ್ರಮದಿಂದ ಸನ್ಮಾನಿಸುವ ಕರ್ತವ್ಯ ನನ್ನದಾಗಿತ್ತು, ಅದನ್ನು ನಿಭಾಯಿಸಿರುವುದಾಗಿ ಹೇಳಿಕೊಂಡರು. ಈ ವೇಳೆ ರಬಕವಿ ಹಜಾರೆ ಟೆಕ್ಸ್ಟೈಲ್ ಪ್ರಭಾವತಿ, ಗಣಪತಿ ರಾವ್ ಹಜಾರೆ ಮತ್ತಿತರರು ಹಾಜರಿದ್ದರು.