ಕುಷ್ಟಗಿ (ಕೊಪ್ಪಳ): ನಗರದ ಕೃಷ್ಣಾ ನದಿ ನೀರಿನ ಪೈಪ್ಲೈನ್ ದುರಸ್ತಿಯನ್ನು ಮಾಡಿರುವ ಪುರಸಭೆ ಇದೀಗ ತಗ್ಗು ಮುಚ್ಚದೇ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪ ಕೇಳಿಬಂದಿದೆ.
ಏನಾಗಿತ್ತು?: ಕುಷ್ಟಗಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕೃಷ್ಣಾ ನದಿ ನೀರಿನ ಪೈಪಲೈನ್ ಇತ್ತೀಚೆಗೆ ಎಸ್ ಆರ್ ಕೆ ಕೈಗಾರಿಕೆ ಪ್ರವೇಶ ದ್ವಾರದ ಸ್ಲ್ಯಾಬ್ ಅಡಿ ಸೋರಿಕೆಯಾಗಿದ್ದರಿಂದ ಅಪಾರ ಪ್ರಮಾಣದ ನೀರು ಹರಿದಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ನಗರ ಕುಡಿಯುವ ನೀರು ಸರಬರಾಜು, ಒಳಚರಂಡಿ ಮಂಡಳಿ ದುರಸ್ತಿಗೆ ಮುಂದಾಗಿತ್ತು.
ಈ ವೇಳೆ ಮಾತನಾಡಿದ ಇಂಡಸ್ಟ್ರಿ ಮಾಲೀಕ ರಾಘವೇಂದ್ರ, ಚರಂಡಿ ನೀರು ತಮ್ಮ ಇಂಡಸ್ಟ್ರಿ ಒಳಗೆ ನುಗ್ಗದಂತೆ ಮಾಡಿದರೆ ಮಾತ್ರ ಪೈಪಲೈನ್ ದುರಸ್ತಿ ಷರತ್ತಿಗೆ ಒಪ್ಪುವುದಾಗಿ ತಿಳಿಸಿದ್ದರು. ಈ ಷರತ್ತಿಗೆ ಒಪ್ಪಿದ್ದ ಮಂಡಳಿಯವರು ತಮ್ಮ ಪೈಪಲೈನ್ ದುರಸ್ತಿ ಮಾಡಿ ತಗ್ಗು ಮುಚ್ಚದೇ ಹಾಗೆಯೇ ಬಿಟ್ಟು ನಾಲ್ಕೈದು ದಿನಗಳಾದರೂ ಇದರತ್ತ ಸುಳಿದಿಲ್ಲ. ಅಲ್ಲದೇ ಸಂಬಂಧಿಸಿದ ಅಧಿಕಾರಿಗಳಿಗೆ ಫೋನ್ ಕರೆ ಮಾಡಿದರೂ ಸಹ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲ್ಲದೇ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತನಗೆ ಸಂಬಂಧಿಸಿಲ್ಲ ಎನ್ನುವಂತೆ ವರ್ತಿಸುತ್ತಿದೆ. ಪೈಪ್ಲೈನ್ ಸೋರಿಕೆ ದುರಸ್ತಿ ತಡೆದಿದ್ದರೆ ಕುಷ್ಟಗಿ ಜನತೆಗೆ ಕುಡಿಯುವ ನೀರಿನ ತೊಂದರೆಯಾಗಿರುತ್ತಿತ್ತು. ಇಲ್ಲಿನ ಜನರಿಗೆ ತೊಂದರೆ ತಪ್ಪಿಸಲು ಹೋಗಿ ವೈಯಕ್ತಿಕವಾಗಿ ತೊಂದರೆಗೆ ಸಿಲುಕುವಂತಾಗಿದೆ ಎಂದು ಕೈಗಾರಿಕೆ ಮಾಲೀಕ ರಾಘವೇಂದ್ರ ಅಳಲು ತೋಡಿಕೊಂಡಿದ್ದಾರೆ.