ಕೊಪ್ಪಳ: ನೆತ್ತಿ ಸುಡುವ ಬಿಸಿಲು, ಎತ್ತ ನೋಡಿದರೂ ಝಳದ ವಾತಾವರಣ. ಕೊಂಚ ನೆರಳು ಸಿಕ್ಕರೆ ಸಾಕು ಬೇರೇನೂ ಬೇಡಪ್ಪ ದೇವರೆ ಎನ್ನುತ್ತದೆ ಮನಸು. ಇದು ಕೊಪ್ಪಳ ಜಿಲ್ಲೆಯಲ್ಲಿ ಸದ್ಯಕ್ಕೆ ಕಂಡು ಬರುತ್ತಿರುವ ಬಿಸಿಲಿನ ಪರಿ.
ಹೌದು, ಕೊಪ್ಪಳ ಜಿಲ್ಲೆಯಲ್ಲೀಗ ರಣಬಿಸಿಲು. ಈ ಉರಿ ಬಿಸಿಲಿಗೆ ಜನ ತತ್ತರಿಸಿ ಹೋಗುತ್ತಿದ್ದಾರೆ. ಒಂದು ಕಡೆ ಚುನಾವಣಾ ಕಾವು, ಮತ್ತೊಂದೆಡೆ ಬಿಸಿಲಿನ ಕಾವಿನಿಂದ ಜನರು ಊರು ಬಿಟ್ಟು ಅಡವಿ ಸೇರಿಬಿಡೋಣ ಎನ್ನುವಂತಾಗಿದೆ.
ಮಧ್ಯಾಹ್ನ 12 ಗಂಟೆಯಾದರೆ ಸಾಕು ಎಲ್ಲಿಯಾದರೂ ಗಾಳಿಯಾಡುವ, ನೆರಳು ಇರುವ ಸ್ಥಳಕ್ಕೆ ಹೋಗಬೇಕು ಎನ್ನುವಂತಾಗುತ್ತದೆ. ಜನರು ಈ ಉರಿ ಬಿಸಿಲಿನಿಂದ ತಪ್ಪಿಸಿಕೊಳ್ಳಲು ನಾನಾ ರೀತಿಯ ಸಾಧನಗಳನ್ನು ಬಳಸಿಕೊಂಡು ನಿಟ್ಟುಸಿರು ಬಿಡುತ್ತಿದ್ದಾರೆ. ಆದರೆ, ಜಾನುವಾರುಗಳ ಪಾಡು ದೇವರಿಗೆ ಪ್ರೀತಿ ಎನ್ನುವಂತಿದೆ. ತಿನ್ನಲು ಮೇವೂ ಸಿಗದೆ, ಇರುವ ಅಲ್ಲೊಂಚೂರು, ಇಲ್ಲೊಂಚೂರು ಒಣ ಹುಲ್ಲನ್ನು ಮೇಯ್ದು ನೆರಳಿರುವ ಸ್ಥಳಕ್ಕೆ ತೆರಳುತ್ತಿವೆ. ಎಲ್ಲಾದರೂ ಮರಗಳು ಕಂಡರೆ ಮೇಯುವುದನ್ನು ಬಿಟ್ಟು ಮರದ ಕೆಳಗೆ ಹೋಗುತ್ತವೆ. ಈ ಸನ್ನಿವೇಶ ನೋಡಿದರೆ ನಿಜಕ್ಕೂ ಮನಕಲುಕುವಂತಿದೆ. ನೆರಳಿರುವ ಸ್ಥಳಗಳಲ್ಲಿ ಕುರಿ, ಮೇಕೆ, ದನ ಕರುಗಳು ವಿಶ್ರಾಂತಿ ಪಡೆಯುವ ದೃಶ್ಯ ರಣಬಿಸಿಲಿನ ಪ್ರಮಾಣವನ್ನು ಹೇಳುತ್ತಿದೆ.
ಇನ್ನು ಗ್ರಾಮೀಣ ಜನರು ಸಹ ನೆರಳಿರುವ ಮರದಡಿ ಈಗ ಠಿಕಾಣಿ ಹೂಡುತ್ತಿರುವುದು ಸಾಮಾನ್ಯವಾಗಿದೆ. ಒಟ್ನಲ್ಲಿ ಬಿಸಿಲಿನ ಬೇಗೆ ಜನ-ಜಾನುವಾರುಗಳನ್ನು ಹೈರಾಣು ಮಾಡುತ್ತಿದೆ.