ಕೊಪ್ಪಳ : ಜಿಲ್ಲೆಯಲ್ಲಿ ಇಂದು ಬೆಳಗ್ಗೆಯಿಂದ ನಿರಂತರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಹಲವೆಡೆ ಸುರಿಯುತ್ತಿರುವ ಮಳೆಯಿಂದಾಗಿ ವಾಹನ ಸವಾರರು, ಬೀದಿ ಬದಿಯ ವ್ಯಾಪಾರಿಗಳು ಪರದಾಡುತ್ತಿದ್ದಾರೆ.
ಭಾರಿ ಮಳೆ ಹಿನ್ನೆಲೆ ಶಾಲಾ-ಕಾಲೇಜುಗಳು, ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲಾಗಿದೆ. ಮಳೆಯಿಂದಾಗಿ ತುಂಗಭದ್ರಾ ಜಲಾಶಯದಿಂದ ನದಿಗೆ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ತುಂಗಭದ್ರಾ ನದಿ ನಡುಗಡ್ಡೆಯಲ್ಲಿ ರೈತರು, ಕುರಿ ಹಾಗೂ ದನಗಾಯಿಗಳು ಸಿಲುಕಿಕೊಂಡಿದ್ದರು.
ಕೊಪ್ಪಳ ತಾಲೂಕಿನ ಶಿವಪುರ ಗ್ರಾಮದ ಬಳಿಯ ಸುಮಾರು 100 ಎಕರೆ ವಿಸ್ತೀರ್ಣದ ನಡುಗಡ್ಡೆಯಲ್ಲಿ ಸಿಲುಕಿದ್ದ ರೈತ ಕುಟುಂಬ ಪರದಾಡುವಂತಾಯಿತು. ನಡುಗಡ್ಡೆಯಲ್ಲಿ ದನಗಾಯಿಗಳು ಮತ್ತು ನಾಗೇಶರಾವ್ ಎಂಬುವರ ಕುಟುಂಬ ಸಿಲುಕೊಂಡಿತ್ತು.
ಸ್ಥಳಕ್ಕೆ ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ದೌಡಾಯಿಸಿದ್ದು, ನಡುಗಡ್ಡೆಯಲ್ಲಿ ಸಿಕುಕಿದ್ದ ರೈತರು ಮತ್ತು ಕುರಿಗಾಯಿಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿ ಬೋಟ್ ಮೂಲಕ ತೆರಳಿ ಸುರಕ್ಷಿತ ಪ್ರದೇಶಕ್ಕೆ ಕರೆ ತಂದಿದ್ದಾರೆ.