ಗಂಗಾವತಿ: ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಂಡಿದ್ದ ಪ್ರವಾಸಿಗರಿಗೆ, ಮರಳಿ ಅವುಗಳನ್ನು ತಲುಪಿಸಿ ಯುವಕನೊಬ್ಬ ಪ್ರಾಮಾಣಿಕತೆ ಮೆರೆದ ಘಟನೆ ತಾಲ್ಲೂಕಿನ ಚಿಕ್ಕರಾಂಪೂರ ಬಳಿಯ ಅಂಜನಾದ್ರಿ ಬೆಟ್ಟದಲ್ಲಿ ನಡೆದಿದೆ.
ಪ್ರವಾಸೋದ್ಯಮ ಇಲಾಖೆಯ ಹೊರಗುತ್ತಿಗೆ ನೌಕರ ಪ್ರವಾಸಿ ಮಿತ್ರ (ಪ್ರವಾಸಿ ಪೊಲೀಸ್) ನಿರುಪಾದಿ ಭೋವಿ ಎಂಬ ಯುವಕ, ಸ್ವತ್ತುಗಳನ್ನು ಕಳೆದುಕೊಂಡಿದ್ದವರಿಗೆ ಸುರಕ್ಷಿತವಾಗಿ ಮರಳಿ ಅವರಿಗೆ ತಲುಪಿಸಿ ಇದೀಗ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ವಿಜಯಪುರದಿಂದ ಅಂಜನಾದ್ರಿ ಬೆಟ್ಟಕ್ಕೆ ಪ್ರವಾಸಕ್ಕೆಂದು ಬಂದಿದ್ದವರು ಬೆಟ್ಟದ ಕೆಳಗೆ ಇರುವ ಪಾರ್ಕಿಂಗ್ ಪ್ರದೇಶದಲ್ಲಿ ಬ್ಯಾಗ್ ಒಂದನ್ನು ಬಿಟ್ಟು ಹೋಗಿದ್ದರು. ಅದರಲ್ಲಿ 15 ಸಾವಿರಕ್ಕೂ ಅಧಿಕ ಮೌಲ್ಯದ ಡಿಎಸ್ಎಲ್ಆರ್ ಕ್ಯಾಮರಾ ಲೆನ್ಸ್, ಚಾರ್ಜರ್, ಮೆಮೋರಿ ಕಾರ್ಡ್ ಇತ್ಯಾದಿ ಇತ್ತು.
ಬೆಳಗ್ಗೆ ಹತ್ತು ಗಂಟೆಗೆ ಬ್ಯಾಗ್ ನಿರುಪಾದಿ ಕೈಗೆ ಸಿಕ್ಕಿದೆ. ಅದನ್ನು ಸುರಕ್ಷಿತವಾಗಿ ತೆಗೆದಿಟ್ಟಿದ್ದಾರೆ. ಬ್ಯಾಗು ಕಳೆದುಕೊಂಡವರು ಮರಳಿ ಹುಡುಕುತ್ತಾ ಸಂಜೆ ಐದು ಗಂಟೆಗೆ ಬಂದಾಗ ಈ ಬಗ್ಗೆ ವಿಚಾರಣೆ ನಡೆಸಿ ಬ್ಯಾಗನ್ನು ಮಾಲೀಕರಿಗೆ ಯುವಕ ಮರಳಿಸಿದ್ದಾರೆ.