ಗಂಗಾವತಿ (ಕೊಪ್ಪಳ): ತೆಲಂಗಾಣದ ಘೋಷಮಾಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಜಾಸಿಂಗ್ ಲೋಧಾ ಮಂಗಳವಾರ ರಾತ್ರಿ ತಾಲ್ಲೂಕಿನ ಚಿಕ್ಕರಾಂಪೂರದ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಹೀಗಾಗಿ ಅವರಿಗೆ ವೈ ಶ್ರೇಣಿಯ ಭದ್ರತೆ ಕಲ್ಪಿಸುವಂತೆ ತೆಲಂಗಾಣದ ಗುಪ್ತದಳ ವಿಭಾಗದ ಎಡಿಜಿಪಿಯು ಸ್ಥಳೀಯ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಖಟ್ಟರ್ ಹಿಂದುತ್ವವಾದಿಯಾಗಿರುವ ರಾಜಾಸಿಂಗ್ ಲೋಧಾ, ತಮ್ಮ ವಿವಾದಾತ್ಮಕ ಭಾಷಣಗಳಿಂದಾಗಿ ಇದುವರೆಗೆ ನೂರಕ್ಕೂ ಹೆಚ್ಚು ಪ್ರಕರಣಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಈಗಾಗಲೇ ವೈ ಶ್ರೇಣಿಯ ಭದ್ರತೆಯಲ್ಲಿರುವ ಶಾಸಕ, ಗಂಗಾವತಿ ಪ್ರವಾಸ ಕೈಗೊಂಡಿದ್ದಾರೆ.
ಹೈದರಾಬಾದ್‌ನಿಂದ ರಸ್ತೆ ಮೂಲಕ ಸಂಚರಿಸಲಿರುವ ಶಾಸಕರು, ರಾಯಚೂರು, ಮಾನ್ವಿ, ಸಿಂಧನೂರು ಮೂಲಕ ಗಂಗಾವತಿಗೆ ಆಗಮಿಸಿ ರಾತ್ರಿ ಅಂಜನಾದ್ರಿ ಪರ್ವತದಲ್ಲಿ ತಂಗಲಿದ್ದಾರೆ. ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಪಂಪಾ ಸರೋವರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವರು. ಹೀಗಾಗಿ ತಲಾ ನಾಲ್ಕು ಸಿಬ್ಬಂದಿಯನ್ನೊಳಗೊಂಡ ಪೈಲೆಟ್, ಭದ್ರತಾ ವಾಹನ ಮತು ಸ್ಥಳೀಯ ಸನ್ನಿವೇಶಕ್ಕೆ ಅನುಗುಣವಾಗಿ ಹೆಚ್ಚಿನ ಭದ್ರತೆ ಕಲ್ಪಿಸುವಂತೆ ಎಡಿಜಿಪಿ ಕೋರಿದ್ದಾರೆ.
ಇದನ್ನೂ ಓದಿ: ಕುಟುಂಬ ಸಮೇತ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ ಯದುವೀರ ಒಡೆಯರ್