ಗಂಗಾವತಿ: ವೈದ್ಯರು, ಶಾಸಕರು, ಪತ್ರಕರ್ತರು ಸೇರಿದಂತೆ ನಾನಾ ವಲಯಗಳನ್ನು ಪ್ರತಿನಿಧಿಸುವವರಿಗೆ ನೀಡಲಾಗುವ ಗುರುತಿನ ಚೀಟಿ ಮಾದರಿಯಲ್ಲಿ ರಾಜ್ಯದ ಎಲ್ಲಾ ರೈತರಿಗೆ ಸ್ವಾಭಿಮಾನಿ ಕಾರ್ಡ್ ವಿತರಿಸುವ ಯೋಜನೆ ಜಾರಿಗೆ ತರುವ ಚಿಂತನೆ ಇದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ನಗರದಲ್ಲಿ ಕೃಷಿ ಕಾಲೇಜಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು 68 ಲಕ್ಷ ರೈತರಿದ್ದು ಎಲ್ಲರಿಗೂ ಸ್ವಾಭಿಮಾನಿ ಕಾರ್ಡ್ ನೀಡುವ ಗುರಿ ಇರಿಸಿಕೊಳ್ಳಲಾಗಿದೆ. ಇದರ ಪ್ರಾಯೋಗಿಕ ಯೋಜನೆಯಾಗಿ ಕೊಪ್ಪಳ ಜಿಲ್ಲೆಯಲ್ಲಿ ಜಾರಿಗೆ ತರಲಾಗಿದೆ ಎಂದರು.
ಜಿಲ್ಲೆಯಲ್ಲಿ 65 ಸಾವಿರ ರೈತರಿಗೆ ಕಾರ್ಡ್ ನೀಡುವ ಯೋಜನೆ ರೂಪಿಸಲಾಗಿದೆ. ರೈತರು ತಮ್ಮ ಕಾರ್ಡ್ ಅನ್ನು ರೀಡರ್ ಮೇಲೆ ಇರಿಸಿದರೆ ಅದರಲ್ಲಿ ರೈತರ ವಿಳಾಸ, ಸರ್ವೇ ನಂಬರ್, ಆಧಾರ್ ಕಾರ್ಡ್ ಸಂಖ್ಯೆ, ಬ್ಯಾಂಕ್ ವಿವರ, ಜಮೀನಿನ ಮಾಹಿತಿ ಸಿಗಲಿದೆ ಎಂದು ತಿಳಿಸಿದರು.
ಈಗಾಗಲೇ ಒಂದೂವರೆ ಲಕ್ಷ ರೈತರಿಗೆ ಕಾರ್ಡ್ ಕೊಡುವ ಯೋಜನೆ ರೂಪಿಸಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿಗೆ ರೈತ ಸಂಜೀವಿನಿ ಯೋಜನೆಯಡಿ ಮಣ್ಣು ಪರೀಕ್ಷಾ ಕೇಂದ್ರ ಆರಂಭಿಸಲು ಅನುದಾನಕ್ಕೆ ಕೋರಿಕೆ ಸಲ್ಲಿಸಲಾಗಿದೆ ಎಂದರು.
ನಕಲಿ ಬೀಜ ವಿತರಣೆ ಜಾಲದ ವಿರುದ್ಧ ಕ್ರಮಕ್ಕೆ ಆಗ್ರಹ:
ಕೊಪ್ಪಳದಲ್ಲಿ ನಡೆಯುತ್ತಿರುವ ನಕಲಿ ಬೀಜ ವಿತರಣೆ ಹಾಗೂ ಕಳಪೆ ಕ್ರಿಮಿನಾಶಕ ಔಷಧಿಗಳ ಮಾರಾಟ ಜಾಲದಲ್ಲಿ ಸ್ವತಃ ಕೃಷಿ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದಾರೆ. ಕೂಡಲೆ ಅಂತವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರೈತ ಸಂಘ ಹಸಿರು ಸೇನೆ ಮುಖಂಡರು ಸಚಿವರಿಗೆ ಆಗ್ರಹಿಸಿದರು.
ರೈತ ಸಂಘಟನೆಯ ನಜೀರಸಬಾ ಮೂಲಿಮನಿ ನೇತೃತ್ವದಲ್ಲಿ ರೈತರು, ಕೃಷಿ ಇಲಾಖೆಯ ಕುಮಾರಸ್ವಾಮಿ ಹಾಗೂ ಪುಟ್ಟಣ್ಣ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕಳೆದ ಸೆಪ್ಟಂಬರ್ ತಿಂಗಳಲ್ಲಿ ಕೊಪ್ಪಳದ ಶಾಂತಿ ಆಗ್ರೋ ಸೇಲ್ಸ್ ಎಂಬ ಅಗಡಿಯಲ್ಲಿ ನಕಲಿ ಬೀಜ ಮತ್ತು ಔಷಧಿ ಮಾರಾಟ ಮಾಡುತ್ತಿದ್ದ ಪ್ರಕರಣ ಪತ್ತೆಹಚ್ಚಲಾಗಿತ್ತು. ಸಾರ್ವಜನಿಕವಾಗಿಯೇ ಮಹಜರ್ ಮಾಡಿದ ಅಧಿಕಾರಿಗಳು ಕಳಪೆ ಹಾಗೂ ನಕಲಿ ಬೀಜ, ಔಷಧಿಯ ಬಗ್ಗೆ ಖಚಿತಪಡಿಸಿದ್ದರು.
![target-of-self-promotion-card-for-65-lakh-farmers-in-the-state-minister-bc-patil](https://etvbharatimages.akamaized.net/etvbharat/prod-images/10897808_news.jpg)
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ರೈತರಿಗೆ ಭರವಸೆ ನೀಡಿ ಆರೋಪಿಗಳನ್ನು ಠಾಣೆಗೆ ಕರೆದೊಯ್ದಿದ್ದರು. ಆದರೆ ಎರಡು ದಿನಗಳ ಬಳಿಕ ಮತ್ತೆ ಅಂಗಡಿ ಓಪನ್ ಆಗಿದ್ದು, ಇದುವರೆಗೂ ಆರೋಪಿಗಳ ಮೇಲೆ ದೂರು ದಾಖಲಾಗಿಲ್ಲ. ಪ್ರಶ್ನಿಸಿದರೆ ಸಲ್ಲದ ಕಾರಣ ನೀಡುತ್ತಿದ್ದಾರೆ. ಈ ಅಕ್ರಮ ಜಾಲದ ಹಿಂದೆ ಸ್ವತಃ ಇಲಾಖೆಯ ಅಧಿಕಾರಿಗಳಿದ್ದಾರೆ. ಅವರನ್ನು ತಕ್ಷಣದಿಂದ ವಜಾ ಮಾಡಬೇಕು ಎಂದು ನಜೀರ್ಸಾಬ ಮೂಲಿಮನಿ ಸಚಿವ ಪಾಟೀಲ್ ಅವರನ್ನು ಒತ್ತಾಯಿಸಿದರು.