ಗಂಗಾವತಿ: "ರಾಜ್ಯದ ಗಡಿಗಳನ್ನು ನಾಶ ಮಾಡಿದ್ದಲ್ಲದೇ ಸಾವಿರಾರು ಕೋಟಿ ಮೌಲ್ಯದ ನೈಸರ್ಗಿಕ ಸಂಪನ್ಮೂಲ ಲೂಟಿ ಮಾಡಿ ಬಳ್ಳಾರಿ ಜಿಲ್ಲೆಯಿಂದ ಗಡಿಪಾರು ಶಿಕ್ಷೆಗೆ ಒಳಗಾಗಿರುವ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿಗೆ ಇಲ್ಲಿನ ಪ್ರಜ್ಞಾವಂತ ಮತದಾರರು ಯಾವುದೇ ಕಾರಣಕ್ಕೂ ಮತ ಹಾಕಬಾರದು" ಎಂದು ಉದ್ಯಮಿ ಟಪಾಲ್ ಗಣೇಶ ಮನವಿ ಮಾಡಿದರು.
ನಗರದ ಖಾಸಗಿ ಹೊಟೇಲ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸಾವಿರಾರು ಕೋಟಿ ರಾಜಧನ ವಂಚಿಸಿದ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಇದೀಗ ಗಂಗಾವತಿಯಿಂದ ರಾಜಕೀಯ ಅಸ್ತಿತ್ವಕ್ಕೆ ಯತ್ನಿಸುತ್ತಿದ್ದಾರೆ. ಇಲ್ಲಿನ ಪ್ರಜ್ಞಾವಂತ ಮತದಾರರು ಯಾವುದೇ ಕಾರಣಕ್ಕೂ ಮತ ನೀಡಿ ಬೆಂಬಲಿಸಬಾರದು. ಬಳ್ಳಾರಿಯಲ್ಲಿ ಫಾರೆಸ್ಟ್ ಆಫೀಸರ್ ಆಗಿದ್ದ ಧರೆಪ್ಪ ನಾಯಕ್ ಎಂಬ ವ್ಯಕ್ತಿ ರೆಡ್ಡಿಯ ಅಕ್ರಮ ಗಣಿಗಾರಿಕೆಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದೀಗ ಅದೇ ವ್ಯಕ್ತಿಯನ್ನು ಸಿರುಗುಪ್ಪಾ ಕ್ಷೇತ್ರದಿಂದ ರೆಡ್ಡಿ ತಮ್ಮ ಪಕ್ಷದಿಂದ ಕಣಕ್ಕಿಳಿಸುವ ಮೂಲಕ ತಮ್ಮ ವಿರುದ್ಧದ ಸಾಕ್ಷ್ಯ ನಾಶ ಮಾಡುತ್ತಿದ್ದಾರೆ" ಎಂದು ಆರೋಪಿಸಿದರು.
"ಗಣಿ ಉದ್ಯಮಕ್ಕೆ ಆಂಧ್ರದಲ್ಲಿ ಪರ್ಮಿಟ್ ತೆಗೆದುಕೊಂಡು ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ಮಾಡಿ ಸಾವಿರಾರು ಕೋಟಿ ಹಣ ಸಂಪಾದಿಸಿರುವ ರೆಡ್ಡಿ ಬಳಿ ಹೆಚ್ಚು ಹಣವಿದೆ. ಇದೇ ಕಾರಣಕ್ಕೆ ರಾಜಕಾರಣ ಮಾಡುತ್ತಿದ್ದಾರೆ. ಗಂಗಾವತಿಯ ಜನ ಪ್ರಬುದ್ಧರು. ರೆಡ್ಡಿ ಹಣ ಪಡೆದು ಸ್ವಚ್ಛ ರಾಜಕಾರಣಿಯನ್ನು ಆಯ್ಕೆ ಮಾಡಬೇಕು" ಎಂದು ಮನವಿ ಮಾಡಿದರು.
"ನಾನು ರಾಜಕಾರಣಿಯಲ್ಲ. ಆದರೆ, ಅಗತ್ಯ ಬಿದ್ದರೆ ಇಲ್ಲಿ ಯಾವುದೇ ಪಕ್ಷದ ನಾಯಕರು ಕರೆದರೂ ರೆಡ್ಡಿ ವಿರುದ್ಧ ಪ್ರಚಾರಕ್ಕೆ ಬರುತ್ತೇನೆ. ರೆಡ್ಡಿ ತನ್ನ ವಿರುದ್ಧದ ಆರೋಪಗಳನ್ನು ಅಲ್ಲಗಳೆಯಲು ಗಂಗಾವತಿಯ ಗಾಂಧಿವೃತ್ತದಲ್ಲಿ ಬಹಿರಂಗ ಚರ್ಚೆಗೆ ಬೇಕಾದರೆ ಬರಲಿ" ಎಂದು ಪಂಥಾಹ್ವಾನ ನೀಡಿದರು.
ಇದನ್ನೂ ಓದಿ: ನೈಸರ್ಗಿಕ ಸಂಪತ್ತು ಲೂಟಿ ಮಾಡಿದ ರೆಡ್ಡಿ ಜನ್ಮದಿನಕ್ಕೆ ಅದ್ಧೂರಿ ಅಭಿನಂದನೆ ಏಕೆ?: ಟಪಾಲ್ ಗಣೇಶ್ ಅಕ್ರೋಶ
2002ರಲ್ಲಿ ರೆಡ್ಡಿ ಹೆಸರಿರಲಿಲ್ಲ: "2002ರ ಮುಂಚೆ ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಎಂಬ ಹೆಸರೇ ಇರಲಿಲ್ಲ. ಸೋನಿಯಾ ಮತ್ತು ಸುಷ್ಮಾ ಸ್ವರಾಜ್ ಬಳ್ಳಾರಿ ಲೋಕಸಭೆಗೆ ಸ್ಪರ್ಧಿಸಲು ಬಂದಾಗ ಇವರು ಚಾಲ್ತಿಗೆ ಬಂದರು. ಸುಷ್ಮಾ ಸ್ವರಾಜ್ ಪರವಾಗಿ ಇವರು ಕೆಲಸ ಮಾಡಿದರು. ಸೋನಿಯಾ ನೀಡಿದ್ದ ಮೂರು ಸಾವಿರ ಕೋಟಿ ಪ್ಯಾಕೇಜ್ನಿಂದಲೇ ಹೆಚ್ಚು ಪ್ರಭಾವ ಬಳಸಿ, ಬಳ್ಳಾರಿಯಲ್ಲಿ ಅಭಿವೃದ್ಧಿ ಮಾಡಿದ್ದೇವೆ ಎಂದು ಬಿಂಬಿಸಿಕೊಂಡರು. ರೆಡ್ಡಿಗೆ ಮೈನಿಂಗ್ ಅನುಮತಿ ಬಂದಿದ್ದೇ 2003ರ ಬಳಿಕ" ಎಂದು ಮಾಹಿತಿ ನೀಡಿದರು.
ನಕಾಶೆ ಪ್ರದರ್ಶನ: "2003ರಲ್ಲಿ ಆಂಧ್ರದಿಂದ ಮೈನಿಂಗ್ ಲೀಸ್ ಪಡೆದುಕೊಂಡ ರೆಡ್ಡಿ, ಕರ್ನಾಟಕ ಭಾಗದಲ್ಲಿ ಬೃಹತ್ ಪ್ರಮಾಣದ ಅಕ್ರಮ ಗಣಿಗಾರಿಕೆ ಮಾಡಿ ದೊಡ್ಡ ಪ್ರಮಾಣದ ಹಣ ಲೂಟಿ ಮಾಡಿದ್ದಾರೆ. ಪಕ್ಕದಲ್ಲಿದ್ದ ಗಣಿ ಮಾಲೀಕರ ಪ್ರದೇಶಕ್ಕೂ ನುಗ್ಗಿ, ಅನ್ಯರ ಗಣಿ ಪ್ರದೇಶದಲ್ಲೂ ಲೂಟಿ ಮಾಡಿದ್ದಾರೆ. ಈ ಬಗ್ಗೆ ಕೆಲವರು ಧ್ವನಿ ಎತ್ತಿದರೆ ಇನ್ನೂ ಕೆಲವರು ಇವರ ಬೆದರಿಕೆ ತಂತ್ರಗಳಿಗೆ ಶರಣಾಗಿದ್ದರು. ರೆಡ್ಡಿ ರಾಜ್ಯದ ಗಡಿಗಳನ್ನು ವ್ಯವಸ್ಥಿತವಾಗಿ ನಾಶ ಮಾಡಿದ್ದಾರೆ" ಎಂದು ಆರೋಪಿಸಿದ ಟಪಾಲ್ ಗಣೇಶ್ ,1856 ರ ರಾಜ್ಯದ ಅರಣ್ಯ ಗಡಿ ಚಿತ್ರದ ನಕಾಶೆ ತೋರಿಸಿದರು.
ಇದನ್ನೂ ಓದಿ: ಗಡಿ ಸರ್ವೇಗೆ ನಕ್ಷೆ ವಿವಾದ: ತರಾತುರಿಯಲ್ಲಿ ಗಡಿ ಗುರುತು ಕಾರ್ಯ ನಡೆದಿರುವ ಶಂಕೆ
ಗಡಿಪಾರು ಮಾಡಿದ್ದೇಕೆ?: "ಪೊಲೀಸ್ ಭಾಷೆಯಲ್ಲಿ ರೌಡಿ, ಗೂಂಡಾ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಜಿಲ್ಲೆಯಿಂದ ಗಡಿಪಾರು ಮಾಡಲಾಗುತ್ತದೆ. ಆದರೆ, ರೆಡ್ಡಿಗೆ ಏಕೆ ಗಡಿಪಾರು ಮಾಡಿದರು ಎಂದು ಮಾಧ್ಯಮದವರು ಅವರನ್ನು ಪ್ರಶ್ನಿಸಬೇಕು. ಗಡಿಪಾರು ಮಾಡಿರುವ ವ್ಯಕ್ತಿ ಕಲ್ಯಾಣ ಪ್ರಗತಿ ಪಕ್ಷ ಎಂದು ಕಟ್ಟಿಕೊಂಡಿದ್ದಾನೆ. ಈ ಸಂಬಂಧ ಶೀಘ್ರದಲ್ಲಿಯೇ ರೆಡ್ಡಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು. ಎಲ್ಲಾ ಪ್ರಕರಣಗಳು ಖುಲಾಸೆಯಾದ ಬಳಿಕವಷ್ಟೇ ರಾಜಕೀಯಕ್ಕೆ ಅವಕಾಶ ನೀಡುವಂತೆ ಪ್ರಕರಣ ದಾಖಲಿಸಲಾಗುವುದು" ಎಂದು ಟಪಾಲ್ ಹೇಳಿದರು.