ಗಂಗಾವತಿ: ತಾಲ್ಲೂಕಿನ ಚಿಕ್ಕಜಂತಕ್ಕಲ್ ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಅಡ್ಡೆಯ ಮೇಲೆ ತಹಶೀಲ್ದಾರ್ ಎಲ್.ಡಿ. ಚಂದ್ರಕಾಂತ್ ನೇತೃತ್ವದಲ್ಲಿ ದಾಳಿ ಮಾಡಿದ ಕಂದಾಯ ಅಧಿಕಾರಿಗಳು ಹತ್ತು ಹರಗೋಲುಗಳನ್ನು ವಶಕ್ಕೆ ಪಡೆದಿದ್ದಾರೆ.
ಚಿಕ್ಕಜಂತಕ್ಕಲ್-ಕಂಪ್ಲಿ ಮಧ್ಯೆ ಇರುವ ಸೇತುವೆ ಸಮೀಪದಲ್ಲಿ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ಸಂಗ್ರಹ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು ತಹಶೀಲ್ದಾರ್ ಹಾಗೂ ಕಂದಾಯ ಸಿಬ್ಬಂದಿ ದಾಳಿ ಮಾಡಿದ್ದಾರೆ.
ದಾಳಿ ವೇಳೆ ಕೆಲವರು ಹರಗೋಲು ಮೂಲಕ ನದಿಯ ಮಧ್ಯೆ ಭಾಗಕ್ಕೆ ತೆರಳಿ ಮರಳನ್ನು ಸಂಗ್ರಹಿಸಿ ದಡಕ್ಕೆ ತರುತ್ತಿರುವ ದೃಶ್ಯಗಳು ಕಂಡು ಬಂದಿವೆ. ಈ ಬಗ್ಗೆ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸುವುದಾಗಿ ತಹಶೀಲ್ದಾರ್ ತಿಳಿಸಿದ್ದಾರೆ.