ಗಂಗಾವತಿ: ಚಾಲಕನ ಮಗಳು ಮೃತಪಟ್ಟಿದ್ದರೂ ಸಾವಿನ ಸುದ್ದಿಯನ್ನು ಮುಚ್ಚಿಟ್ಟು ಕರ್ತವ್ಯಕ್ಕೆ ನಿಯೋಜನೆ ಮಾಡಿದ ಇಲ್ಲಿನ ಸಾರಿಗೆ ಘಟಕದ ಸಹಾಯಕ ಸಂಚಾರ ನಿಯಂತ್ರಣಾಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಮಹಿಳಾ ಸಹಾಯಕ ಸಂಚಾರ ನಿಯಂತ್ರಣಾಧಿಕಾರಿ ಹೇಮಾವತಿ ಅವರನ್ನು ಸೇವೆಯಿಂದ ಅಮಾನತು ಮಾಡಿ ಸಾರಿಗೆ ಸಂಸ್ಥೆಯ ಕೊಪ್ಪಳದ ವಿಭಾಗೀಯ ನಿಯಂತ್ರಣಾಧಿಕಾರಿ ಫೈಯಾಜುದ್ದೀನ್ ಆದೇಶ ಜಾರಿ ಮಾಡಿದ್ದಾರೆ.
ಇಲ್ಲಿನ ಸಾರಿಗೆ ಘಟಕದಲ್ಲಿ ಚಾಲಕ ಕಂ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿರುವ ಬಾಗಲಕೋಟೆ ಜಿಲ್ಲೆ ಮಂಜುನಾಥ ಅವರ ಪುತ್ರಿ ಹನ್ನೊಂದು ವರ್ಷದ ಕವಿತಾ ಅನಾರೋಗ್ಯದಿಂದ ಬುಧವಾರ ಸಾವನ್ನಪ್ಪಿದ್ದರು. ಆದರೆ, ಮಂಜುನಾಥ ಕರ್ತವ್ಯದ ಮೇಲೆ ಕೊಲ್ಲಾಪುರಕ್ಕೆ ತೆರಳಿದ್ದರಿಂದ ತಕ್ಷಣ ಮಾಹಿತಿ ಸಿಕ್ಕಿರಲಿಲ್ಲ.
ಮಗಳ ಸಾವಿನ ಸುದ್ದಿ ಮುಚ್ಚಿಟ್ಟ ಕೆಎಸ್‌ಆರ್‌ಟಿಸಿ ಸಿಬ್ಬಂದಿ.. ಕರಳು ಹಿಂಡುವಂತಿದೆ ಅಪ್ಪನ ರೋದನೆ
ಕುಟುಂಬಸ್ಥರು ಮಗುವಿನ ಸಾವಿನ ಸುದ್ದಿಯನ್ನು ತಿಳಿಸಿದ್ದರೂ ಸಾರಿಗೆ ಅಧಿಕಾರಿಗಳು ಮಂಜುನಾಥ ಅವರಿಗೆ ತಿಳಿಸುವಲ್ಲಿ ಉದ್ದೇಶಪೂರ್ವಕ ನಿರ್ಲಕ್ಷ್ಯ ಮಾಡಿದ್ದಾರೆ. ಇದಕ್ಕೆ ಹೇಮಾವತಿ ಮುಖ್ಯ ಕಾರಣ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಕರಣದ ಹಿನ್ನೆಲೆ ಪ್ರತಿಭಟನೆಗಳು ನಡೆದಿದ್ದವು. ಸಾರಿಗೆ ಸಂಸ್ಥೆಯ ಜಿಲ್ಲಾ ಸಂಚಾರ ನಿಯಂತ್ರಣಾಧಿಕಾರಿಗಳಾದ ಎ.ಗೌಡಗೇರಿ ಹಾಗೂ ದೇವಾನಮದ ಬಿರಾದಾರ್ ಎಂಬುವವರು ಸ್ಥಳಕ್ಕೆ ಭೇಟಿ ನೀಡಿ ಸಲ್ಲಿಸಿದ ವರದಿ ಅನ್ವಯ ಅಧಿಕಾರಯನ್ನು ಅಮಾನತು ಮಾಡಲಾಗಿದೆ.