ಗಂಗಾವತಿ: ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ, ಗಣಿಗಾರಿಕೆ, ಇಸ್ಪೀಟ್ ಜೂಜಾಟದಲ್ಲಿ ಪೊಲೀಸ್ ಇಲಾಖೆಯ ಮೇಲಧಿಕಾರಿಗಳ ಕೈವಾಡ ಇದೆ ಎಂದು ದಲಿತ ಮುಖಂಡ ಆರತ ತಿಪ್ಪಣ್ಣ ಆರೋಪಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ವ್ಯಾಪಕವಾಗಿರುವ ಜೂಜಾಟದ ಬಗ್ಗೆ ಡಿವೈಎಸ್ಪಿಗೆ ಮನವಿ ಪತ್ರ ಕೊಡಲಾಗಿತ್ತು. ಈ ಹಿನ್ನೆಲೆ ಡಿವೈಎಸ್ಪಿ ತಮ್ಮ ವ್ಯಾಪ್ತಿಯಲ್ಲಿನ ಎಲ್ಲ ಠಾಣೆಯ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದರು. ತಕ್ಷಣ ವಿಠಲಾಪುರದಲ್ಲಿ ನಡೆದ ಜೂಜು ಅಡ್ಡೆ ಮೇಲೆ ದಾಳಿ ಮಾಡಿದಾಗ ನಗರಸಭಾ ಸದಸ್ಯರು ಸಹ ಅಲ್ಲಿದ್ದರು. ಈ ವೇಳೆ, ಪೊಲೀಸರು 17 ಕಾರುಗಳನ್ನು ವಶಕ್ಕೆ ಪಡೆದು ನಾಲ್ಕು ಲಕ್ಷ ಹಣ ಸೀಜ್ ಮಾಡಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಆದರೆ, ಅಲ್ಲಿ ಒಂದೂವರೆ ಕೋಟಿಗೂ ಅಧಿಕ ಮೌಲ್ಯದ ಹಣವನ್ನು ಜೂಜಾಟದಲ್ಲಿ ಪಣಕ್ಕೆ ಇಡಲಾಗಿತ್ತು. ವಶಕ್ಕೆ ಪಡೆದ 17 ಕಾರುಗಳ ಮಾಲೀಕರ ಮೇಲೆ ಇದುವರೆಗೂ ದೂರು ದಾಖಲಿಸಿಲ್ಲ. ಈ ಪ್ರಕರಣದಲ್ಲಿ ಎಸ್ಪಿ ಜಿ. ಸಂಗೀತಾ ಅವರ ನೇರ ಕೈವಾಡವಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.