ಕೊಪ್ಪಳ: ನಮ್ಮ ಪಕ್ಷದಲ್ಲಿ ಮುಂದಿನ ಸಿಎಂ ಬಗ್ಗೆ ಈಗ ಚರ್ಚಿಸುವುದು ಸರಿಯಲ್ಲ. ಈಗಲೇ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳುವುದು ತಪ್ಪು ಎಂದು ಕಾಂಗ್ರೆಸ್ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದ್ದಾರೆ.
ಕೊಪ್ಪಳ ತಾಲೂಕಿನ ಬಸಾಪುರ ಬಳಿಯ ಖಾಸಗಿ ಏರ್ಪೋರ್ಟ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಇನ್ನೂ ಎರಡು ವರ್ಷವಿದೆ. ಕಾಂಗ್ರೆಸ್ ಪಕ್ಷದಲ್ಲಿ ನಾವು ಹೇಳಿದಂತೆ ಸಿಎಂ ಮಾಡುವುದಿಲ್ಲ. ಪಕ್ಷದ ಹೈಕಮಾಂಡ್ ಆ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತದೆ. ಹೈಕಮಾಂಡ್ ತೀರ್ಮಾನವೇ ನಮ್ಮ ಪಕ್ಷದಲ್ಲಿ ಅಂತಿಮ. ಮುಂದಿನ ಸಿಎಂ ಬಗ್ಗೆ ಚರ್ಚೆ ಮಾಡುವುದು ಸರಿಯಲ್ಲ. ಯಾರೂ ಅದರ ಬಗ್ಗೆ ಪ್ರಸ್ತಾಪ ಮಾಡಬಾರದು ಎಂದರು.
ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಜಮೀರ್ ಅಹ್ಮದ್ ಒಂದು ಬಾರಿ ನೀಡಿದ ಹೇಳಿಕೆಗೆ ಪಕ್ಷ ಈಗಾಗಲೇ ಅವರಿಗೆ ನಿರ್ದೇಶನ ನೀಡಿದೆ. ಮುಂದಿನ ಸಿಎಂ ಬಗ್ಗೆ ಅವರು ಪದೇಪದೇ ಹೇಳುವುದು ಸರಿಯಲ್ಲ. ಇದು ಪಕ್ಷಕ್ಕೆ ಮುಜುಗರವಾಗುತ್ತದೆ. ಸಿದ್ದಾರಾಮಯ್ಯ ಅವರು ಸಿಎಂ ಆಗಿದ್ದಾಗ ನೂರಾರು ಒಳ್ಳೆಯ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ನೂರೆಂಟು ಒಳ್ಳೆಯ ಕೆಲಸ ಮಾಡಿದ್ದಾರೆ. ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಿದರೆ ಅದರಲ್ಲೇನಿದೆ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡುತ್ತಾರೆ. ಆದರೆ ತೀರ್ಮಾನ ಮಾಡುವುದು ಪಕ್ಷದ ಹೈಕಮಾಂಡ್. ಈ ಸಮಯದಲ್ಲಿ ಅದನ್ನು ಹೇಳುವ ಅವಶ್ಯಕತೆಯಿಲ್ಲ ಎಂದರು.
ಇನ್ನೂ ಎರಡು ವರ್ಷಗಳ ಬಳಿಕ ಚುನಾವಣೆ ಇದೆ. ಒಂದು ವೇಳೆ ಹೈಕಮಾಂಡ್ ಮೊದಲೇ ಸಿಎಂ ಅಭ್ಯರ್ಥಿ ಘೋಷಣೆ ಮಾಡಿದರೆ ನಾವು ಅದನ್ನೇ ಹೇಳುತ್ತೇವೆ ಎಂದರು. ಇನ್ನು ಬಿಜೆಪಿಯವರ ಬಗ್ಗೆ ನಾವು ಮಾತನಾಡುವುದು ಸರಿಯಲ್ಲ. ಅಮರೇಗೌಡ ರಾಜಕಾರಣ ಮಾಡ್ತಾರೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಹೇಳುತ್ತಾರೆ. ಹಾಗಾದ್ರೆ ನಾವು ರಾಜಕಾರಣ ಮಾಡುವುದಕ್ಕೆ ಬಂದೀವಾ ಅಥವಾ ದನಕಾಯೋಕೆ ಬಂದೀವಾ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಗರಂ ಆದರು.