ಕೊಪ್ಪಳ: ದಕ್ಷಿಣ ಭಾರತದ ಮಹಾಕುಂಭ ಮೇಳ ಎಂದು ಬಣ್ಣಿತವಾಗಿರುವ ಗವಿಮಠದ ಶ್ರೀಗವಿಸಿದ್ದೇಶ್ವರ ಜಾತ್ರೆಗೆ ಇನ್ನು 8 ದಿನಗಳು ಮಾತ್ರ ಬಾಕಿ ಉಳಿದಿವೆ. ಪ್ರತಿ ವರ್ಷದಂತೆ ಈ ಬಾರಿಯೂ ಜನವರಿ 12 ರಿಂದ 14ರವರೆಗೆ ಉತ್ಸವದ ಮಾದರಿಯಲ್ಲಿ ನಡೆಯಲಿರುವ ಶ್ರೀಮಠದ ಜಾತ್ರೆಗೆ ಅಗತ್ಯ ಸಿದ್ಧತೆಗಳು ಭರ್ಜರಿಯಾಗಿ ನಡೆಯುತ್ತಿವೆ.
ಮಹಾರಥೋತ್ಸವ ನಡೆಯುವ ಮಠದ ಮುಂದಿನ ದೊಡ್ಡ ಬಯಲು ಜಾಗವನ್ನು ಸ್ವಚ್ಛಗೊಳಿಸಲಾಗುತ್ತಿದೆ. ಜಾತ್ರೆಗೆ ಬರುವ ಲಕ್ಷ ಲಕ್ಷ ಭಕ್ತರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವ ಕಾರ್ಯಗಳು ಸೇರಿದಂತೆ ಜಾತ್ರೆಯ ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿವೆ.
ಜಾತ್ರೆಗೆ ಬರುವ ಯಾತ್ರಿಕರಿಗೆ ರುಚಿಕರ, ಮೃಷ್ಟಾನ್ನ ಭೋಜನ, ಪ್ರಸಾದ ಬಡಿಸಲು ಮಹಾದಾಸೋಹ ಮಂಟಪ, ಅಡುಗೆ ತಯಾರಿಸಲು ದೊಡ್ಡ ಅಡುಗೆ ಮನೆ ಸಿದ್ಧಗೊಳಿಸಲಾಗುತ್ತಿದೆ. ಈಗಾಗಲೇ ಶ್ರೀ ಮಠದ ಬಲಭಾಗದಲ್ಲಿ ಪ್ರತಿ ವರ್ಷ ಮಹಾದಾಸೋಹ ಮಂಟಪ ನಿರ್ಮಿಸುವ ಜಾಗದಲ್ಲಿಯೇ ಮಹಾದಾಸೋಹ ಮಂಟಪ ಬಹುತೇಕ ಸಿದ್ಧವಾಗಿದೆ. ಅಡುಗೆಗೆ ಬೇಕಾದ ದೊಡ್ಡ ದೊಡ್ಡ ಪರಿಕರಗಳನ್ನು ಸಹ ವ್ಯವಸ್ಥೆ ಮಾಡಲಾಗಿದೆ.
ಏಕಕಾಲಕ್ಕೆ ಸಹಸ್ರಾರು ಜನರು ಊಟ ಮಾಡಲು, ಪ್ರಸಾದ ಬಡಿಸಲು ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಇನ್ನು ರಥ ಸ್ವಚ್ಛಗೊಳಿಸುವುದು, ರಥವನ್ನು ಅಲಂಕಾರ ಮಾಡುವ ಕಾರ್ಯ ಸೇರಿದಂತೆ ಮೂರು ದಿನಗಳ ಕಾಲ ನಡೆಯುವ ಧಾರ್ಮಿಕ, ಸಂಗೀತ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿರುವ ಶ್ರೀಮಠದ ಬೆಟ್ಟದಲ್ಲಿ ನೈಸರ್ಗಿಕವಾದ ಬಯಲು ವೇದಿಕೆ ಸಜ್ಜುಗೊಳಿಸಲಾಗುತ್ತಿದೆ.
ಈ ಬಾರಿ ಅಂತಾರಾಷ್ಟೀಯ ಪ್ಯಾರಾ ಓಲಂಪಿಕ್ ಕ್ರೀಡಾಪಟು, ಪದ್ಮಶ್ರೀ ಡಾ.ಮಾಲತಿ ಹೊಳ್ಳ ಅವರು ಮಹಾರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಒಟ್ಟಾರೆಯಾಗಿ ಜಾತ್ರೆಯ ಸಿದ್ಧತೆಗಳು ಅಂತಿಮ ಹಂತದಲ್ಲಿದ್ದು, ಗವಿಮಠ ಈಗ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ.