ಗಂಗಾವತಿ(ಕೊಪ್ಪಳ): ಸರ್ಕಾರಿ ಶಾಲೆ ಉಳಿಸಿ-ಬೆಳೆಸಿ ಅಭಿಯಾನ ಆರಂಭಿಸಿರುವ ಕೆಚ್ಚೆದೆಯ ಕನ್ನಡತಿ ಎಂದೇ ಹೆಚ್ಚು ಪರಿಚಿತವಾಗಿರುವ ಯುವತಿ ಅನು, ಕಳೆದ ನಾಲ್ಕು ವರ್ಷಗಳಿಂದ ಸರ್ಕಾರಿ ಶಾಲೆಗಳನ್ನು ಗುರುತಿಸಿ ಸುಣ್ಣ-ಬಣ್ಣ ಬಳಿದು ಒಪ್ಪ-ಓರಣವಾಗಿಸುವ ಪ್ರವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಹಲವು ಶಾಲೆಗಳ ಅಭಿವೃದ್ಧಿ.. ಮೂಲತಃ ಸಿಂಧನೂರು ತಾಲೂಕಿನ ಹಳ್ಳಿಯೊಂದರ ಅನು ಸಮಾನ ಮನಸ್ಕ ಯುವಕರನ್ನು ಕಟ್ಟಿಕೊಂಡು ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಭಗೀರಥ ಯತ್ನ ನಡೆಸಿದ್ದಾರೆ. ಗಂಗಾವತಿ, ಸಿಂಧನೂರು, ಕೊಪ್ಪಳ, ಯಲಬುರ್ಗಾ, ರಾಯಚೂರು ಜಿಲ್ಲೆ ಸೇರಿದಂತೆ ಹಲವು ಗ್ರಾಮಗಳ ಶಾಲೆಗಳನ್ನು ಈಗಾಗಲೇ ಅಭಿವೃದ್ಧಿಪಡಿಸಿದ್ದಾರೆ.
ಕೇವಲ ಶಾಲೆಗಳ ಅಭಿವೃದ್ಧಿ ಮಾತ್ರವಲ್ಲ, ಆರ್ಥಿಕವಾಗಿ ಅತ್ಯಂತ ದುರ್ಬಲ ವರ್ಗಕ್ಕೆ ಸೇರಿದವರು ಕಣ್ಣಿಗೆ ಕಂಡರೆ ಅವರಿಗೂ ನೆರವಾಗುವ ಮೂಲಕ ಮಾನವೀಯತೆಯ ಆಸರೆ ನೀಡುತ್ತಿದ್ದಾರೆ. ಯುವತಿ ಅನು ಅವರ ಈ ಕಾರ್ಯಕ್ಕೆ ಹತ್ತಾರು ಯುವಕರು ಸಾಥ್ ನೀಡಿದ್ದಾರೆ.
ಗ್ರಾಮಸ್ಥರ ಮನವೊಲಿಸುವ ಮೂಲಕ ಶಾಲೆಯ ಅಭಿವೃದ್ಧಿ.. ಬಡತನದ ಕುಟುಂಬದಿಂದಲೇ ಬಂದಿರುವ ಅನು, ಶಾಲೆಗಳಿಗೆ ಸುಣ್ಣ-ಬಣ್ಣ ಬಳಿಯಲು ಎಲ್ಲಿಯೂ ದೇಣಿಗೆ ಪಡೆಯುತ್ತಿಲ್ಲ. ಬದಲಿಗೆ ಆಯಾ ಗ್ರಾಮಸ್ಥರನ್ನು ಸೇರಿಸಿ ಊರಿನ ಸಮಸ್ಯೆ, ಶಾಲೆಯ ಮಕ್ಕಳ ಸಮಸ್ಯೆ ಅವರ ಗಮನಕ್ಕೆ ತರುತ್ತಾರೆ. ಅವರಲ್ಲಿಯೇ ಒಬ್ಬರನ್ನು ವಂತಿಗೆ ಸಂಗ್ರಹಿಸಲು ನಿಯೋಜಿಸುತ್ತಾರೆ.
ನಿಯೋಜಿತ ವ್ಯಕ್ತಿಯಿಂದಲೇ ಸರಕು ಸಾಮಗ್ರಿಗಳನ್ನು ತರಿಸಿಕೊಳ್ಳುವ ಈ ತಂಡ ತಾವೇ ಮುಂದೆ ನಿಂತು ಶಾಲೆಯ ದುರಸ್ತಿ, ಸುಣ್ಣ-ಬಣ್ಣ, ಫ್ಲೋರಿಂಗ್ ಮಾಡುವಂತ ಕೆಲಸ ಮಾಡುತ್ತದೆ. ಯಾವ ಶಾಲೆಯಲ್ಲಿ ಕಾಮಗಾರಿ ಆರಂಭಿಸುತ್ತಾರೋ ಅದೇ ಶಾಲೆಯಲ್ಲಿ ಉಳಿದುಕೊಳ್ಳುವುದು ಈ ತಂಡದ ವಿಶೇಷತೆ.
ಸಾಮಾಜಿಕ ಕಳಕಳಿ ಮತ್ತು ನಿಸ್ವಾರ್ಥ ಸೇವೆ.. ಸರ್ಕಾರಿ ಶಾಲೆಯ ಶಿಕ್ಷಕರು ಬೆಳಗಿನ ಉಪಹಾರ ಮತ್ತು ರಾತ್ರಿ ಊಟದ ವ್ಯವಸ್ಥೆ ಮಾಡಿಸುತ್ತಾರೆ. ಮಿಕ್ಕಂತೆ ಮಧ್ಯಾಹ್ನ ಶಾಲೆಯ ಮಕ್ಕಳೊಂದಿಗೆ ಬಿಸಿಯೂಟ ಸೇವಿಸುವ ಈ ತಂಡದ ಸದಸ್ಯರು ಒಂದು ಪೈಸೆ ಹಣ ಸಹ ಪಡೆಯದೇ ನಿಸ್ವಾರ್ಥ ಕೆಲಸ ಮಾಡಿ ಮುಗಿಸಿದ ಬಳಿಕ ಮತ್ತೊಂದು ಊರಿಗೆ ತೆರಳುತ್ತದೆ.
ಗಂಗಾವತಿ ನಗರದ ನೀಲಕಂಠೇಶ್ವರ ವೃತ್ತದಲ್ಲಿರುವ ಶಾಸಕರ ಮಾದರಿಯ ಬಾಲಕಿಯರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಳೆದ ಎರಡು ವಾರದಿಂದ ಕೋಣೆ, ಕಾಂಪೌಂಡ್ ವಾಲ್ ಸೇರಿದಂತೆ ಇನ್ನಿತರ ಭಾಗದಲ್ಲಿ ಸುಣ್ಣ-ಬಣ್ಣ ಬಳಿಯುತ್ತಿದ್ದಾರೆ.
ಟೀಂ ಅಕ್ಕ, ಅನುಕರಣೆ ಪ್ರತಿಷ್ಠಾಪನ.. 'ಸರ್ಕಾರಿ ಶಾಲೆ ಉಳಿಸಿ ಅಭಿಯಾನದಡಿ ರಾಜ್ಯ ಪ್ರವಾಸ ಮಾಡುತ್ತಿದ್ದೇವೆ. ಟೀಂ ಅಕ್ಕ, ಅನುಕರಣೆ ಪ್ರತಿಷ್ಠಾಪನದಿಂದ ಪ್ರತಿ ಜಿಲ್ಲೆ ಮತ್ತು ತಾಲೂಕಿನಲ್ಲಿ ದುಸ್ಥಿತಿಯಲ್ಲಿರುವ ಮತ್ತು ಕಳೆಗುಂದಿರುವ ಶಾಲೆಗಳಿಗೆ ಸುಣ್ಣ ಬಣ್ಣ ಮತ್ತು ಪ್ಯಾಚ್ ವರ್ಕ್ ಮಾಡುತ್ತೇವೆ. ಈ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನಮ್ಮಿಂದಾದ ಕೊಡುಗೆ ನೀಡುತ್ತೇವೆ' ಎನ್ನುತ್ತಾರೆ ತಂಡದ ಮುಖ್ಯಸ್ಥೆ ಅನು.
ಕೈಜೋಡಿಸಿದ ಗಂಗಾವತಿಯ ಉದ್ಯಮಿ.. ನಗರದ ಉದ್ಯಮಿ ಹಾಗೂ ಸಮಾಜ ಸೇವಕ ಕೃಷ್ಣ ದಲಬಂಜನ್ ಅವರು, ಅನು ಅವರ ಕರೆಗೆ ಓಗೊಟ್ಟು ಸುಮಾರು ನಾಲ್ಕರಿಂದ ಐದು ಲಕ್ಷ ರೂಪಾಯಿ ಮೊತ್ತದಲ್ಲಿ ಶಾಲೆಗೆ ಸುಣ್ಣ-ಬಣ್ಣ ಕೊಡಿಸಿದ್ದಾರೆ. 'ಕಳೆದ ಎರಡು ವಾರಗಳಿಂದ ಗಂಗಾವತಿಯ ಶಾಸಕರ ಮಾದರಿ ಹೆಣ್ಣು ಮಕ್ಕಳ ಶಾಲೆಗೆ ಸುಣ್ಣ ಬಣ್ಣ ಬಳಿಯುವ ಕೆಲಸ ನಡೆಯುತ್ತಿದೆ. ಇನ್ನೂ 15 ದಿನಗಳ ಕಾಲ ಇದು ನಡೆಯಲಿದೆ. ಅನು ಅವರಿಂದ ಸ್ಫೂರ್ತಿ ಪಡೆದು ನನ್ನಿಂದಾದ ನೆರವನ್ನು ನೀಡಿದ್ದೇನೆ. ಅವರ ಸಾಮಾಜಿಕ ಕಾರ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೆ. ಅವರ ಈ ಕಾರ್ಯ ಇಷ್ಟವಾಗಿದೆ' ಎಂದು ಕೃಷ್ಣ ದಲಬಂಜನ್ ಸಂತಸ ಹಂಚಿಕೊಂಡರು.
ಈ ಶಾಲೆಗೆ ಬಣ್ಣ ಹಚ್ಚುವ ಕಾರ್ಯ ಮುಗಿದ ಬಳಿಕ ಮತ್ತೊಂದು ಶಾಲೆಯನ್ನು ಆಯ್ದುಕೊಳ್ಳಲಾಗುವುದು ಎಂದು ಈ ತಂಡದ ತಿಳಿಸಿದ್ದಾರೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಯಾವುದೇ ಪ್ರತಿಫಲಾಕ್ಷೆ ಬಯಸದೇ ನಿಸ್ವಾರ್ಥ ಸೇವೆ ಮಾಡುತ್ತಿರುವ ಈ ತಂಡದ ಕಾರ್ಯಕ್ಕೆ ಸಾಮಾಜಿಕ ಕಳಕಳಿ ಇರುವವರು ಕೈಜೋಡಿಸಲಿ ಎಂದು ಆಶಿಸುತ್ತೇವೆ. ಅವರ ಈ ಕಾರ್ಯಕ್ಕೆ ಜನರಿಂದ ಮತ್ತಷ್ಟು ಬೆಂಬಲ ಸಿಗಲಿ ಎಂದು ಹಾರೈಸೋಣ.
ಇದನ್ನೂ ಓದಿ: ಮಹಿಳೆಯರಿಗೆ ಗೌರವವಿಲ್ಲ.. ಪಕ್ಷ ತೊರೆದ ತಮಿಳುನಾಡು ಬಿಜೆಪಿ ನಾಯಕಿ ಗಾಯತ್ರಿ ರಘುರಾಮ್