ಕುಷ್ಟಗಿ(ಕೊಪ್ಪಳ): ಕುಷ್ಟಗಿ ಪಟ್ಟಣದ ಬಸವೇಶ್ವರ ವೃತ್ತದಿಂದ ಪುರಸಭೆಯವರೆಗಿನ ಮುಖ್ಯ ರಸ್ತೆಯಲ್ಲಿ ವಾಣಿಜ್ಯ ಮಳಿಗೆಗಳ ಮುಂದೆ ತಳ್ಳುಗಾಡಿಯವರಿಗೆ ವ್ಯವಹರಿಸಲು ಅವಕಾಶ ಕಲ್ಪಿಸಿರುವುದಕ್ಕೆ ಅಂಗಡಿ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಮುಖ್ಯ ರಸ್ತೆಯಲ್ಲಿರುವ ಪಾದಚಾರಿ ರಸ್ತೆಯ ಬದಿಯಲ್ಲಿ ತರಕಾರಿ, ಹಣ್ಣು ವ್ಯಾಪಾರಸ್ಥರು ತಮಗಿಷ್ಟದಂತೆ ತಳ್ಳುಗಾಡಿಯಲ್ಲಿ ವ್ಯವಹರಿಸುತ್ತಿದ್ದು, ಖರೀದಿಸಲು ಬರುವ ಗ್ರಾಹಕರು ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸುತ್ತಿದ್ದರಿಂದ ಟ್ರಾಫಿಕ್ ಸಮಸ್ಯೆಗೆ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ ಪಿಎಸ್ಐ ಚಿತ್ತರಂಜನ್ ನಾಯಕ್, ಮುಖ್ಯ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದನ್ನು ತಪ್ಪಿಸಲು ಮತ್ತೊಂದು ಬದಿಯಲ್ಲಿ ತಳ್ಳುಗಾಡಿ ವ್ಯಾಪಾರಸ್ಥರಿಗೆ ಅವಕಾಶ ಕಲ್ಪಿಸಿದ್ದರು. ಆದರೆ ವಾಣಿಜ್ಯ ಅಂಗಡಿಗಳ ಮುಂದೆ ತಳ್ಳುಗಾಡಿಗಳನ್ನು ನಿಲ್ಲಿಸಿದರೆ ತಮ್ಮ ವ್ಯಾಪಾರಕ್ಕೆ ಅಡಚಣೆಯಾಗಲಿದೆ. ಇದೇ ರೀತಿಯ ವ್ಯವಸ್ಥೆಯಾದರೆ ರಸ್ತೆಯಲ್ಲಿ ವಾಹನ ನಿಲ್ಲಿಸುವ ಸಾಧ್ಯತೆ ಇದೆ. ಹಾಗಾಗಿ ಇವರಿಗೆ ಸಂತೆ ಮಾರುಕಟ್ಟೆಯಲ್ಲಿ ವ್ಯವಹರಿಸಲು ಅವಕಾಶ ಕಲ್ಪಿಸಬೇಕು. ರಸ್ತೆಯ ಬದಿಯಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಿದರೆ ಮತ್ತೆ ಸಂಚಾರಕ್ಕೆ ಅಡಚಣೆಯಾಗಲಿದೆ ಎಂದಿದ್ದಾರೆ.
ಈ ಕುರಿತು ಪಿಎಸ್ಐ ಚಿತ್ತರಂಜನ್ ನಾಯಕ್ ಪ್ರತಿಕ್ರಿಯಿಸಿ, ಈ ವ್ಯಾಪಾರಸ್ಥರು ಖಾಲಿ ಡಬ್ಬಾ ಹಿಂದಿಟ್ಟು ಮುಂದೆ ತಳ್ಳುಗಾಡಿ ಇಟ್ಟು ವ್ಯವಹರಿಸುತ್ತಿರುವುದು ಗಮನಕ್ಕೆ ಬಂದಿದೆ. ಕೆಲವರು ವ್ಯವಹರಿಸದೆ ಇದ್ದರೂ ಖಾಲಿ ಡಬ್ಬಾ ಇಟ್ಟಿರುವುದನ್ನು ಸದ್ಯ ತೆರವುಗೊಳಿಸಲಾಗಿದೆ. ವ್ಯಾಪಾರಸ್ಥರು ಶಿಸ್ತು ಕಾಪಾಡಲು ಸೂಚಿಸಿರುವುದಾಗಿ ಈಟಿವಿ ಭಾರತಕ್ಕೆ ತಿಳಿಸಿದರು.