ಕೊಪ್ಪಳ: ನಗರದಲ್ಲಿ ನಡೆಯುತ್ತಿರುವ ಪ್ರಸಿದ್ಧ ಶ್ರೀ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಈಗ ವ್ಯಕ್ತಿಯೊಬ್ಬರು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಮೈಮೇಲೆ ಬಣ್ಣ ಬಳಿದುಕೊಂಡು ರಕ್ತದಾನ, ನೇತ್ರದಾನದ ಮಹತ್ವ ಸಾರುತ್ತಾ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ನೇತ್ರದಾನ, ರಕ್ತದಾನ ಮಾಡಿ ಎಂದು ಜಾತ್ರೆಯಲ್ಲಿ ಓಡಾಡುತ್ತಾ ಮಹಡಿಮನೆ ಶಿವಕುಮಾರ ಎಂಬುವರು ರಕ್ತದಾನ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ದಾವಣಗೆರೆಯವರಾದ ಮಹಡಿಮನೆ ಶಿವಕುಮಾರ್ ರಕ್ತದಾನದ ಕುರಿತು ಜಾಗೃತಿ ಮೂಡಿಸಲೆಂದೇ ಕೊಪ್ಪಳ ಜಾತ್ರೆಗೆ ಬಂದಿದ್ದಾರೆ. ಮೈಗೆ ಬಣ್ಣ ಬಳಿದುಕೊಂಡು ರಕ್ತದಾನ ಮಾಡಿ ಅಂತಾ ಜನರ ಬಳಿ ಹೋಗಿ ಜಾಗೃತಿ ಮೂಡಿಸುತ್ತಿದ್ದಾರೆ. ಸುಮಾರು 20 ವರ್ಷಗಳಿಂದ ರಕ್ತದಾನದ ಜಾಗೃತಿ ಮೂಡಿಸುವಲ್ಲಿ ತೊಡಗಿಸಿಕೊಂಡಿರುವ ಇವರು, ಈಗಾಗಲೇ 82 ಬಾರಿ ರಕ್ತದಾನ ಮಾಡಿದ್ದಾರಂತೆ. ಇವರ ಜೀವನದಲ್ಲಿ ನಡೆದ ಆ ಒಂದು ಘಟನೆ ರಕ್ತದಾನದ ಜಾಗೃತಿ ಮೂಡಿಸುವಂತೆ ಮಾಡಿದೆ.
ಮಹಡಿ ಮನೆ ಶಿವಕುಮಾರ್ ಅವರು ರಕ್ತದಾನದ ಜಾಗೃತಿ ಮೂಡಿಸುವ ಕಾಯಕದಲ್ಲಿ ತೊಡಗಿಕೊಳ್ಳಲು ಆ ಒಂದು ಘಟನೆ ಕಾರಣ ಮತ್ತು ಪ್ರೇರಣೆಯಾಗಿದೆ. ಸುಮಾರು 20 ವರ್ಷದ ಹಿಂದೆ ಶಿವಕುಮಾರ್ ಅವರ ಸಹೋದರಿ ಅಗ್ನಿ ದುರಂತವೊಂದರಲ್ಲಿ ಗಾಯಗೊಂಡಿದ್ದರಂತೆ. ಈ ವೇಳೆ ಅವರಿಗೆ ರಕ್ತದ ಅವಶ್ಯಕತೆ ಇತ್ತು. ನಾನು ನನ್ನ ಸಹೋದರ ಸೇರಿ 8 ಬಾಟಲಿ ರಕ್ತ ಕೊಟ್ಟೆವು. ಆದರೆ ಇನ್ನೂ ರಕ್ತದ ಅವಶ್ಯಕತೆ ಇದ್ದರೂ ಸಿಗಲಿಲ್ಲ. ಇದರಿಂದಾಗಿ ಅಂದೇ ರಕ್ತದಾನ ಮಾಡುವ ಹಾಗೂ ರಕ್ತದಾನದ ಜಾಗೃತಿ ಮೂಡಿಸಲು ತೀರ್ಮಾನಿಸಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವೆ ಎನ್ನುತ್ತಾರೆ ಶಿವಕುಮಾರ್.
ಇನ್ನು ಜಾಗೃತಿ ಮೂಡಿಸಲೆಂದೇ ಕೊಪ್ಪಳಕ್ಕೆ ಬಂದ ಮಹಡಿಮನೆ ಶಿವಕುಮಾರ್ ಅವರಿಗೆ ರೆಡ್ ಕ್ರಾಸ್ ಸಂಸ್ಥೆಯ ಸಿಬ್ಬಂದಿ ಕೈಜೋಡಿಸಿದ್ದಾರೆ. ಕೂಲಿಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವುದರ ಜತೆಗೆ ಇಂಥ ಜಾಗೃತಿ ಕೆಲಸ ಮಾಡುತ್ತಿರುವ ಶಿವಕುಮಾರ್ ನೆರವಿಗೆ ನಾವು ಇರುತ್ತೇವೆ ಎನ್ನುತ್ತಾರೆ ರೆಡ್ ಕ್ರಾಸ್ ಸಂಸ್ಥೆಯ ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಶ್ರೀನಿವಾಸ್ ಹ್ಯಾಟಿ.
ಇದನ್ನೂ ಓದಿ:ನೂತನ ಕೃಷಿ ಕಾಯ್ದೆ ರದ್ಧತಿಗೆ ಆಗ್ರಹ: 65ನೇ ದಿನವೂ ಮುಂದುವರಿದ ರೈತರ ಪ್ರತಿಭಟನೆ