ಕುಷ್ಟಗಿ: ಸಿಎಂ ಆಗಲು ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅಷ್ಟೇ ಅಲ್ಲ, ಕಾಂಗ್ರೆಸ್ನಲ್ಲಿ ಅನೇಕ ಅರ್ಹ ನಾಯಕರಿದ್ದಾರೆ. ಈ ಕುರಿತು ಬಹಿರಂಗ ಚರ್ಚೆ ಮಾಡುವುದು ಬೇಡ. ಈಗ ಸಿಎಂ ಚರ್ಚೆ ಅನಾವಶ್ಯಕ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ಇತ್ತೀಚೆಗೆ ಕೋವಿಡ್ನಿಂದಾಗಿ ಅಕಾಲಿಕ ಮರಣಹೊಂದಿದ್ದ ಆಪ್ತ ಕಾರ್ಯಕರ್ತ ಮಹೇಶ ಕೊನಸಾಗರ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದ ಬಳಿಕ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ನಮಗೆ 2023ರ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸುವ ಗುರಿ ಇದೆ. ಸಿಎಂ ಆಗಲು ಯಾರಿಗೆ ಆಸೆ ಇರುವುದಿಲ್ಲ ಹೇಳಿ?. ಸಿಎಂ ಆಗುವ ಆಸೆ ಇರಬಾರದು ಅಂತೇನೂ ಇಲ್ಲ, ಎಲ್ಲರಿಗೂ ಸಿಎಂ ಆಗುವ ಆಸೆ ಇದ್ದೇ ಇರುತ್ತದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ 113 ಮಂದಿ ಶಾಸಕರು ಆಯ್ಕೆಯಾಗಬೇಕು, ಅಗ ಹೈಕಮಾಂಡ್ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತದೆ ಎಂದರು.
ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತವಿದೆ. ಈ ಹಿಂದೆ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದ ಸಂದರ್ಭದಲ್ಲಿ 40, 50 ಸೀಟ್ಗಳು ಮಾತ್ರ ಬಂದಿದ್ದವು. ಬಿಜೆಪಿ ಟಾರ್ಗೆಟ್ ಅಷ್ಟೇ, ಹೆಚ್ಚು ಸ್ಥಾನ ಬರುವುದಿಲ್ಲ ಎಂದು ಸತೀಶ್ ಜಾರಕಿಹೊಳಿ ಭವಿಷ್ಯ ನುಡಿದರು.