ಕೊಪ್ಪಳ: ಜಿಲ್ಲೆಯ ಕುಷ್ಟಗಿಯಲ್ಲಿ ಇತ್ತೀಚಿಗೆ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ ಅವರು ನೀಡಿರುವ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಪಾಟೀಲ್ ಭಾಷಣ ಮಾಡುವಾಗ ಸರ್ದಾರ್ ವಲ್ಲಭಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್ ಉಗ್ರವಾದಿಗಳಂತಿದ್ದರು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಸರ್ದಾರ್ ಪಟೇಲ್ ಮತ್ತು ಬೋಸ್ ಇವರೆಲ್ಲ ಹಿಂಸಾ ಮಾರ್ಗ ಪಾಲಿಸಿದವರು. ಆದರೆ, ಮಹಾತ್ಮಗಾಂಧಿ ಅವರದ್ದು ಅಹಿಂಸಾತ್ಮಕ ಚಳವಳಿಯಾಗಿತ್ತು. ಇನ್ನೂ ಕೊನೆ ಘಳಿಗೆಯಲ್ಲಿ ಕಾಂಗ್ರೆಸ್ ಸೇರಿದ್ದ ಪಟೇಲ್ ಅವರನ್ನು ಬಿಜೆಪಿ ತಮ್ಮವರೇ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಈಗ ಪಟೇಲರ ದೊಡ್ಡ ಮೂರ್ತಿಯನ್ನೇ ನಿರ್ಮಿಸಿ ವೈಭವೀಕರಿಸುತ್ತಿದ್ದಾರೆ. ಅಷ್ಟೇಅಲ್ಲ ಬಿಜೆಪಿಯವರು ಯುವಜನರಲ್ಲಿ ತಪ್ಪುಕಲ್ಪನೆ ಬಿತ್ತುತ್ತಿದ್ದಾರೆ ಎಂದು ಕಿಡಿಕಾರಿದರು.