ಕೊಪ್ಪಳ: ಧಾರವಾಡದ ನುಗ್ಗಿಕೇರಿ ಆಂಜನೇಯ ದೇವಸ್ಥಾನದ ಆವರಣದಲ್ಲಿ ಹಿಂದೂಯೇತರ ವ್ಯಾಪಾರಿಯ ಕಲ್ಲಂಗಡಿ ಹಾನಿಗೊಳಿಸಿದ್ದು ತಪ್ಪು. ಪ್ರಕರಣದ ಹಿನ್ನೆಲೆ ಶ್ರೀ ರಾಮಸೇನೆ ನಾಲ್ವರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯಾರೇ ತಪ್ಪು ಮಾಡಿದರೂ ಶಿಕ್ಷೆಯಾಗಲಿ ಎಂದು ಶ್ರೀ ರಾಮಸೇನೆಯ ವಿಭಾಗೀಯ ಸಂಚಾಲಕ ಸಂಜೀವ ಮರಡಿ ಹೇಳಿದ್ದಾರೆ.
ಕೊಪ್ಪಳದ ಮೀಡಿಯಾ ಕ್ಲಬ್ನಲ್ಲಿ ಮಾತನಾಡಿದ ಅವರು, ಅಲ್ಲಿ ಕಲ್ಲಂಗಡಿ ಹಣ್ಣು ಮಾರಾಟ ಮಾಡಲು ಅವಕಾಶವಿಲ್ಲ ಎಂದು ಒಂದು ವಾರ ಗಡುವು ನೀಡಿದ್ದರು. ಆದರೂ ಅವರು ಯಾಕೆ ಅಂಗಡಿ ತೆಗೆಯಲಿಲ್ಲ?. ನಾವು ಯಾವುದೇ ಧರ್ಮಕ್ಕೆ ತೊಂದರೆ ಕೊಡುತ್ತಿಲ್ಲ. ನಮ್ಮ ಪೂಜೆಗಳನ್ನು ಮನೆಯಲ್ಲಿ ಮಾಡುತ್ತೇವೆ. ಹೊರಗಡೆ ಬಂದಾಗ ಹಿಂದೂಗಳಾಗಿದ್ದರೆ ಸಾಕು ಎಂದರು.
ಹಿಂದೂಗಳ ಅಂಗಡಿಗಳಲ್ಲಿ ಹಿಂದೂಗಳು ವ್ಯಾಪಾರ ಮಾಡಲಿ. ಮುಸ್ಲಿಂರು ಮಾರಾಟದ ವಸ್ತುಗಳಿಗೆ ಉಗುಳು ಹಚ್ಚಿಕೊಡುತ್ತಾರೆ. ಕಲ್ಲಂಗಡಿ ವಿಷಯಕ್ಕೆ ಮಾತನಾಡುವವರು ಶಿವು ಉಪ್ಪಾರ, ಪರೇಸ ಮೇಸ್ತಾ, ಇತ್ತೀಚಿಗೆ ಬೆಂಗಳೂರಿನ ಯುವಕನ ಕೊಲೆಯ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ಎಂದು ಪ್ರಶ್ನಿಸಿದ ಅವರು ಬಿಜೆಪಿ ಅಥವಾ ಕಾಂಗ್ರೆಸ್ ಸರ್ಕಾರ ಅವರ ಸಾವಿಗೆ ನ್ಯಾಯ ಒದಗಿಸಿಲ್ಲ. ಕೇವಲ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು. ನಾನು ವೈಯಕ್ತಿಕವಾಗಿ ಹಿಜಾಬ್, ಹಲಾಲ್ ಬಗ್ಗೆ ಮಾತನಾಡುವುದಿಲ್ಲ. ನಾವು ನಮ್ಮ ಸಂಸ್ಕೃತಿ ಪಾಲಿಸಬೇಕು. ಬಿಜೆಪಿ ಶಾಸಕರು ಟೋಪಿ ಹಾಕಿಕೊಂಡು ನಮಾಜು ಮಾಡಿದರೆ ಅವರಿಗೆ ಚುನಾವಣೆಯಲ್ಲಿ ಜನ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದರು.
ಏ.13 ರಿಂದ 21 ರವರೆಗೆ ಅಂಜನಾದ್ರಿಯಲ್ಲಿ ಹನುಮೋತ್ಸವ ನಡೆಯಲಿದೆ. ದೇಶದ ವಿವಿಧ ಕಡೆಯಿಂದ 200 ಕ್ಕೂ ಅಧಿಕ ಸಾಧು ಸಂತರು ಬರಲಿದ್ದಾರೆ. 1,11,111 ಕುಂಕಮಾರ್ಚನೆ ಮಾಡಲಾಗುವುದು. ದೇವಸ್ಥಾನದಲ್ಲಿ ಶ್ರೀ ರಾಮಸೇನೆಯಿಂದ ಪ್ರತ್ಯೇಕವಾಗಿ ಹನುಮೋತ್ಸವ ಮಾಡಲಾಗುತ್ತದೆ. ಪೂಜೆಗೆ ಜಿಲ್ಲಾಡಳಿತ ಒಪ್ಪಿಕೊಂಡಿದೆ ಎಂದು ಇದೇ ವೇಳೆ ಸಂಜೀವ ಮರಡಿ ಹೇಳಿದರು.
ಇದನ್ನೂ ಓದಿ: ನುಗ್ಗಿಕೇರಿಯಲ್ಲಿ ವ್ಯಾಪಾರಿ ತೆರವು, ಗಲಾಟೆ ಪ್ರಕರಣ: ಶ್ರೀರಾಮ ಸೇನೆಯ ನಾಲ್ವರು ಕಾರ್ಯಕರ್ತರು ಪೊಲೀಸ್ ವಶಕ್ಕೆ