ಕೊಪ್ಪಳ: ನಗರದ ಕೇಂದ್ರೀಯ ಬಸ್ ನಿಲ್ದಾಣದ ಬಳಿ ಕನಕದಾಸರ ಪುತ್ಥಳಿ ನಿರ್ಮಾಣ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಹೆಚ್ಚುವರಿ ಜಾಗದ ಕುರಿತು ಅಧಿಕಾರಿಗಳು ಯಾರಿಗೂ ತಿಳಿಸದಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಸಂಸದ ಸಂಗಣ್ಣ ಕರಡಿ ಸ್ಪಷ್ಟನೆ ನೀಡಿದ್ದಾರೆ.
ಕನಕದಾಸರ ಬಗ್ಗೆ ನಾವು ಅಪಾರ ಗೌರವವಿಟ್ಟುಕೊಂಡಿದ್ದೇವೆ. ಹಿಂದಿನಿಂದಲೂ ಕನಕದಾಸರ ವೃತ್ತವು ನಗರಸಭೆ ಆಸ್ತಿಯಲ್ಲೇ ಇತ್ತು. ನಗರಸಭೆಗೆ ಸೇರಿದ ವಾಣಿಜ್ಯ ಮಳಿಗೆ ಶಿಥಿಲಗೊಂಡಿದೆ ಎಂದು ಇತ್ತೀಚಿಗೆ ಆ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ. ಕನಕದಾಸರ ಪುತ್ಥಳಿ ಸ್ಥಾಪನೆಗೆ ಹೆಚ್ಚುವರಿ ಜಾಗ ಬೇಕಿದ್ದರೆ ನಿಯಮದ ಪ್ರಕಾರ ಮಾಡಬೇಕಾಗುತ್ತದೆ. ಕಾನೂನು ಪ್ರಕಾರ ಹೆಚ್ಚುವರಿ ಜಾಗ ನೀಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಏಕಾಏಕಿ ಆಡಳಿತಾಧಿಕಾರಿಗಳು ಯಾರಿಗೂ ತಿಳಿಸದೆ ಸರ್ವಾಧಿಕಾರಿಯ ರೀತಿ ನಿರ್ಧಾರ ಮಾಡಿರುವುದಕ್ಕೆ ನಮ್ಮ ವಿರೋಧವಿದೆ. ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಹಾಗೂ ನಗರಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.
ಇದನ್ನೂ ಓದಿ: ಕೊಪ್ಪಳ : ವಿವಾದದ ಕಿಡಿ ಹೊತ್ತಿಸಿದ ಕನದಾಸ ಮೂರ್ತಿ ಪ್ರತಿಷ್ಠಾಪನೆ ಸ್ಥಳ
ಏನಿದು ಘಟನೆ?: ಕೊಪ್ಪಳ ನಗರದ ಕೇಂದ್ರೀಯ ಬಸ್ ನಿಲ್ದಾಣದ ಬಳಿ ಇರುವ ನಗರಸಭೆಗೆ ಸೇರಿದ ಕನಕದಾಸರ ವೃತ್ತದಲ್ಲಿ ಪುತ್ಥಳಿ ನಿರ್ಮಾಣಕ್ಕೆ ಕಾಮಗಾರಿ ನಡೆಸಲಾಗಿತ್ತು. ಇದರ ಹಿಂದೆ ಇದ್ದ ನಗರಸಭೆಗೆ ಸೇರಿದ ವಾಣಿಜ್ಯ ಮಳಿಗೆ ಶಿಥಿಲಗೊಂಡಿದೆ ಎಂದು ನಗರಸಭೆ ಇತ್ತೀಚಿಗೆ ಆ ಕಟ್ಟಡವನ್ನು ನೆಲಸಮಗೊಳಿಸಿದೆ. ಇದರ ಜೊತೆಗೆ ಒಂದಿಷ್ಟು ಕಾಮಗಾರಿಯಾಗಿದ್ದ ಕನಕದಾಸರ ಮೂರ್ತಿ ಪ್ರತಿಷ್ಠಾಪನೆಯ ಕಟ್ಟೆಯನ್ನು ಸಹ ಕೆಡವಲಾಗಿದೆ. ಜೊತೆಗೆ ಕನಕದಾಸರ ಮೂರ್ತಿ ಪ್ರತಿಷ್ಠಾಪನೆಯ ಕಟ್ಟಡ ಕಾಮಗಾರಿಯನ್ನು ನಗರಸಭೆ ಅನುಮತಿ ಇಲ್ಲದೆ ಅಧಿಕಾರಿಗಳು ನಡೆಸುತ್ತಿದ್ದಾರೆ. ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುವಂತೆ ಸಂಸದ ಸಂಗಣ್ಣ ಕರಡಿ ಜಿಲ್ಲಾಧಿಕಾರಿಗಳಿಗೆ ಜುಲೈ 5 ರಂದು ಪತ್ರ ಬರೆದಿದ್ದರು. ಇದಕ್ಕೆ ಹಾಲುಮತ ಸಮಾಜದ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.