ಕುಷ್ಟಗಿ (ಕೊಪ್ಪಳ): ಸೇವೆಯಿಂದ ನಿವೃತ್ತಿ ಪಡೆದ ಬಳಿಕ ಶಿಕ್ಷಕರೊಬ್ಬರು ಮಕ್ಕಳ ಆಟಿಕೆಗಳ ಬಳಸಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ ವಿಭಿನ್ನ ಕಾರ್ಯದಲ್ಲಿ ನಿರತರಾಗಿದ್ದಾರೆ. ಬಾಗಲಕೋಟೆ ಜಿಲ್ಲೆ ಹುನಗುಂದ ಪಟ್ಟಣದ ಶಾಮರಾವ್ ಕುಲಕರ್ಣಿ ವಿಶೇಷ ಆಟಿಕೆಗಳನ್ನು ಬಳಸಿ ಮಕ್ಕಳಿಗೆ ಪಾಠ ಹೇಳುವ ಕಾಯಕ ಮಾಡುತ್ತಿದ್ದಾರೆ.
ಯಾವುದೇ ಪ್ರಚಾರ ಬಯಸದೇ ತಮ್ಮ ನಿವೃತ್ತ ಜೀವನವನ್ನೂ ಸಹ ಇವರು ಶೈಕ್ಷಣಿಕ ಸೇವೆಗಾಗಿ ಮುಡಿಪಾಗಿಟ್ಟಿದ್ದಾರೆ. ಈ ಆಟಿಕೆ ಕೊಳ್ಳಲು ಬರೋಬ್ಬರಿ 12 ಲಕ್ಷ ರೂ. ಖರ್ಚು ಮಾಡಿದ್ದಾರೆ. ಪೈಥಾಗೋರಸ್, ನ್ಯೂಟನ್ ನಿಯಮ, ಲ.ಸಾ.ಅ ಕಂಡು ಹಿಡಿಯುವ ವಿಧಾನವನ್ನು ಸರಳವಾಗಿ ಆಟಿಕೆಗಳ ಸಹಾಯದಿಂದಲೇ ಹೇಳಿಕೊಡುತ್ತಾರೆ. ಇದರ ಜೊತೆ ಗೆಳೆಯರ ಬಳಗದಿಂದ 850ಕ್ಕೂ ಹೆಚ್ಚಿನ ಪವಾಡ ರಹಸ್ಯ ಬಯಲು ವೇದಿಕೆ ಕಾರ್ಯಕ್ರಮ ನೀಡುತ್ತಿದ್ದು, ಮೂಢನಂಬಿಕೆ ನಿವಾರಣೆಗೂ ಶ್ರಮಿಸುತ್ತಿದ್ದಾರೆ.
ಮನೆಯಲ್ಲಿನ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಸರಳ ವಿಜ್ಞಾನ ಮತ್ತು ಗಣಿತ ಮಾದರಿ ತಯಾರಿಸಿದ್ದಾರೆ. ಈ ಮುಖೇನ ಮನೆಯನ್ನೇ ಚಿಕ್ಕ ವಿಜ್ಞಾನ ಲ್ಯಾಬ್ ಆಗಿ ಪರಿವರ್ತಿಸಿದ್ದು, ಮಿನಿ ಪ್ರಯೋಗಾಲಯದಂತೆ ಕಂಡುಬರುತ್ತದೆ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಶಾಮರಾವ್ ಕುಲಕರ್ಣಿ, 'ನನ್ನ ಬಳಿ ವಿಜ್ಞಾನ, ಗಣಿತ, ಇಂಗ್ಲಿಷ್ ವಿಷಯಗಳ ಪ್ರಾಯೋಗಾತ್ಮಕ ಬೋಧನಾ ಕಿಟ್, ಬೊಂಬೆಗಳು, ವಿವಿಧ ಬಗೆಯ ಪ್ರಾಣಿ, ಪಕ್ಷಿ, ಯಾಂತ್ರಿಕ ಆಟಿಕೆ, ಕಲಿಕಾ ಉಪಕರಣಗಳಿವೆ. ಮಕ್ಕಳೊಟ್ಟಿಗೆ ಬೆರೆಯುವುದು ನನ್ನ ಆಯುಷ್ಯವೃದ್ಧಿಗೆ ಸಹಾಯಕವಾಗಿದೆ. ಅನೇಕ ಶಿಕ್ಷಕರು ಆಸಕ್ತಿಯಿಂದ ನಮ್ಮ ಮನೆಗೆ ಬಂದು ವಿಜ್ಞಾನ, ಗಣಿತ ವಿಷಯಗಳ ಸರಳೀಕರಣ ವಿಧಾನ ಕೇಳಿಕೊಂಡು ತಮ್ಮ ಶಾಲಾ ಮಕ್ಕಳಿಗೂ ಹೇಳಿಕೊಡುತ್ತಾರೆ' ಎಂದು ಸಂತಸ ಹಂಚಿಕೊಂಡರು.
ಇದನ್ನೂ ಓದಿ: ₹39 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡ ಮಂತ್ರಿ ಮಾಲ್: ಬೀಗ ಹಾಕಿ, ತೆರೆದು ಬಿಬಿಎಂಪಿ ಪ್ರಹಸನ