ಕೊಪ್ಪಳ: ಗಂಗಾವತಿ ತಾಲೂಕಿನ ವಿರುಪಾಪುರಗಡ್ಡೆಯಲ್ಲಿ ಪ್ರವಾಹ ಭೀತಿಯಲ್ಲಿದ್ದ ಜನರ ರಕ್ಷಣೆ ವೇಳೆ ನೀರಿನಲ್ಲಿ ಕೊಚ್ಚಿಹೋಗಿ ಬಳಿಕ ಸೇಫ್ ಆಗಿ ಬಂದ ರಕ್ಷಣಾ ಸಿಬ್ಬಂದಿಯು ಘಟನೆ ಬಗ್ಗೆ ಮಾತನಾಡಿದ್ದಾರೆ.
ವಿರುಪಾಪುರಗಡ್ಡೆಯಲ್ಲಿ ಪ್ರವಾಹ ಭೀತಿಯಲ್ಲಿದ್ದ ಜನರ ರಕ್ಷಣೆಗೆ ವೇಳೆ ಆರು ಮಂದಿ ಸಿಬ್ಬಂದಿ ಬೋಟ್ ಮುಳುಗಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಬಳಿಕ ಅವರನ್ನು ರಕ್ಷಣೆ ಮಾಡಲಾಗಿತ್ತು. ಇವರಲ್ಲಿ ಸಿವಿಲ್ ಡಿಫೆನ್ಸ್ ಕಮಾಂಡರ್ ಡಾ. ಚೇತನ್ ಅವರು ಪ್ರವಾಹದಲ್ಲಿ ಬರೋಬ್ಬರಿ 12 ಕಿ.ಮೀ. ದೂರದವರೆಗೂ ಈಜಿಕೊಂಡು ಹೋಗಿದ್ದರು.
ನೆರೆ ಸಂದರ್ಭದಲ್ಲಿ ಅನೇಕ ಜಿಲ್ಲೆಗಳಲ್ಲಿ ಸಾವಿರಾರು ಜನರನ್ನು ನಾವು ರಕ್ಷಣೆ ಮಾಡಿದ್ದೇವೆ. ಇಂದು ಸಹ ಕೊಪ್ಪಳ ಜಿಲ್ಲೆಯಲ್ಲಿ ತುಂಗಭದ್ರಾ ನದಿ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗಾಗಿ ಬಂದಿದ್ದೆವು. ಬೋಟ್‍ನಲ್ಲಿ ತಾಂತ್ರಿಕ ದೋಷವುಂಟಾಗಿ ಬೋಟ್ ಮಗುಚಿ ಬಿದ್ದಿತು. ನಾವು ಸಾವಿರಾರು ಜನರನ್ನು ರಕ್ಷಣೆ ಮಾಡಿರುವ ಪುಣ್ಯದಿಂದ ಮತ್ತೆ ಸೇಫ್ ಆಗಿ ಬಂದಿದ್ದೇವೆ. ಇಂತಹ ಸೇವೆಗೆ ನಾವು ಯಾವಾಗಲೂ ಸಿದ್ಧ ಎಂದು ಡಾ. ಚೇತನ್ ಅವರು ಕೆಚ್ಚೆದೆಯ ಮಾತುಗಳನ್ನಾಡಿದ್ದಾರೆ.
ಇದೇ ಬೋಟ್‍ನಲ್ಲಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಸೂಗೂರಪ್ಪ ಈಟಿವಿ ಭಾರತದೊಂದಿಗೆ ಮಾತನಾಡಿ, ತೇಲಿಕೊಂಡು ಹೋಗುವಾಗ ನಾವು ಬದುಕುಳಿಯುತ್ತೇವೆ ಎಂಬ ನಂಬಿಕೆ ಇತ್ತು. ಸ್ಥಳೀಯರ ಸಮಯ ಪ್ರಜ್ಞೆಯಿಂದ ನನ್ನನ್ನು ರಕ್ಷಣೆ ಮಾಡಿದರು. ಜನರ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಈ ಸಂದರ್ಭದಲ್ಲಿ ಯಾವುದೇ ಅಪಾಯ ಎದುರಾದರೂ ಸಹ ನಾವು ಭಯಬೀಳುವುದಿಲ್ಲ ಎಂದು ಹೇಳಿದರು.