ಕುಷ್ಟಗಿ (ಕೊಪ್ಪಳ): ಕುಷ್ಟಗಿಯ ತಾಲೂಕಾ ಕ್ರೀಡಾಂಗಣದಲ್ಲಿ 72ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಸಮಾರಂಭದ ಅಧ್ಯಕ್ಷತೆವಹಿಸಿದ್ದರು.
ಇದೇ ವೇಳೆ ಮಾತನಾಡಿದ ಅವರು, ಗಣರಾಜ್ಯೋತ್ಸವ ದೇಶದ ಸರ್ವ ಜನಾಂಗದ ಹಬ್ಬವಾಗಿದೆ. ದೇಶದಲ್ಲಿ ಹಲವಾರು ಹಬ್ಬಗಳನ್ನು ಆಚರಿಸಲಾಗುತ್ತಿದೆ. ಆ ಹಬ್ಬಗಳಿಗೆ ಸಂಸ್ಕೃತಿ, ಸಂಸ್ಕಾರದ ಹಿನ್ನೆಲೆ ಇದೆ. ಅದರಂತೆ ಗಣರಾಜ್ಯೋತ್ಸವಕ್ಕೂ ಪ್ರಜಾಪ್ರಭುತ್ವದ ಹಿನ್ನೆಲೆಯ ಸರ್ವರಿಗೂ ಸಮ ಬಾಳು, ಸಮ ಪಾಲಿನ ಹಿನ್ನೆಲೆಯ ಮಹತ್ವ ಇದೆ ಎಂದು ಶಾಸಕರು ಹೇಳಿದರು.
ತಹಶೀಲ್ದಾರ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ತಾಪಂ ಅಧ್ಯಕ್ಷೆ ಮಹಾಂತಮ್ಮ ಪೂಜಾರಿ, ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ, ತಾಪಂ ಇಒ ಕೆ.ತಿಮ್ಮಪ್ಪ, ಬಿಇಒ ಚನ್ನಬಸಪ್ಪ ಮಗ್ಗದ, ಪಿಎಸ್‌ಐ ತಿಮ್ಮಣ್ಣ ನಾಯಕ್, ಸಿಡಿಪಿಒ ಅಮರೇಶ, ಪ್ರಾಚಾರ್ಯ ಬಿ ಎಂ ಕಂಬಳಿ ಇದ್ದರು.
ಇದೇ ವೇಳೆ ಎಸ್ಸೆಸ್ಸೆಲ್ಸಿಯಲ್ಲಿ ಆಧಿಕ ಅಂಕಗಳಿಸಿದ ವಿದ್ಯಾ ರಾಠೋಡ್, ಅಕ್ಷತಾ ಅಡವಿಬಾವಿ, ಯಲ್ಲನಗೌಡ ತುಗ್ಗಲಡೋಣಿ ಅವರಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿದವು.
ಲಾರಿ ಚಾಲಕನನ್ನು ಬೆನ್ನಟ್ಟಿ ಹಿಡಿದವರಿಗೆ ಸನ್ಮಾನ : ಕಳೆದ ಜ.21ರಂದು ಕುಷ್ಟಗಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ ದೋಟಿಹಾಳ ಕ್ರಾಸ್ ಬಳಿ ಸಂಭವಿಸಿದ ಬೈಕ್ ಸವಾರ ಬಸವರಾಜ್ ಬೆಲ್ಲದ್ಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ ಲಾರಿ ಚಾಲಕನನ್ನು ಪೊಲೀಸರಿಗೆ ಒಪ್ಪಿಸಲು ಸಹಾಯ ಮಾಡಿ ಸಮಯ ಪ್ರಜ್ಞೆ ಮೆರೆದ ಕುಷ್ಟಗಿಯ ಮೂವರು ಯುವಕರನ್ನು ತಾಲೂಕಾಡಳಿತ ಹಾಗೂ ಪೊಲೀಸ್ ಇಲಾಖೆ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಲಾಯಿತು.