ಗಂಗಾವತಿ (ಕೊಪ್ಪಳ): ವ್ಯಕ್ತಿ ಮೃತಪಟ್ಟಾಗ ಆತನ ಅಂತ್ಯ ಸಂಸ್ಕಾರವನ್ನು ಗೌರವಯುತವಾಗಿ ನಡೆಸಿಕೊಡಬೇಕಾದ್ದು ಸಭ್ಯ ನಾಗರಿಕ ಸಮಾಜದ ಕರ್ತವ್ಯ. ಅದನ್ನು ಬಿಟ್ಟು ತಿರಸ್ಕಾರ ಮಾಡುವುದು, ಪ್ರತಿಭಟನೆ ಮಾಡುವ ಮೂಲಕ ವಿರೋಧ ವ್ಯಕ್ತಪಡಿಸುವುದು ಅಮಾನವೀಯತೆಯಾಗಿದೆ ಎಂದು ಜಿಲ್ಲಾಧಿಕಾರಿ ಸುರಾಳ್ಕರ್ ವಿಕಾಸ್ ಕಿಶೋರ್ ಹೇಳಿದ್ದಾರೆ.
ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ತೆರಳಿದ ಅಧಿಕಾರಿಗಳಿಗೆ ಸಂಗಾಪುರ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಹಲ್ಲೆಗೆ ಮುಂದಾಗಿದ್ದರು. ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ, ಈಗಾಗಲೇ ತಪ್ಪಿತಸ್ಥ ಗ್ರಾಮಸ್ಥರ ವಿರುದ್ಧ ದೂರು ದಾಖಲಿಸಲಾಗಿದೆ. ಊರಿನಲ್ಲಿ ಹುಟ್ಟಿ, ಬೆಳೆದು ಸಂಬಂಧಗಳನ್ನು ಹೊಂದಿರುವ ಯಾವುದೇ ವ್ಯಕ್ತಿ ಸಾವನ್ನಪ್ಪಿದಾಗ ಆತನ ಊರಿನಲ್ಲೇ ಅಂತ್ಯ ಸಂಸ್ಕಾರ ಮಾಡಬೇಕು ಎಂಬುವುದು ಸಂಪ್ರದಾಯ. ಆದರೆ ಅದಕ್ಕೆ ತದ್ವಿರುದ್ಧವಾಗಿ ಜನ ವರ್ತಿಸುತ್ತಿರುವುದು ಸರಿಯಲ್ಲ ಎಂದರು.
ಮುಖ್ಯವಾಗಿ ಮೃತದೇಹದಿಂದ ವೈರಸ್ ಹರಡುವುದಾಗಿದ್ದರೆ ಶವವನ್ನು ಗ್ರಾಮಕ್ಕೆ ಸಾಗಿಸುವ ಅಗತ್ಯವಾದರೂ ಜಿಲ್ಲಾಡಳಿತಕ್ಕೆ ಏನಿರುತ್ತದೆ? ಜಿಲ್ಲಾ ಕೇಂದ್ರದಲ್ಲಿಯೇ ಅಂತ್ಯ ಸಂಸ್ಕಾರ ಮಾಡಿ ಮುಗಿಸಲಾಗುತ್ತಿತ್ತು. ತಜ್ಞರ ಸಾಕಷ್ಟು ಸಲಹೆ ಪಡೆದ ಬಳಿಕವೇ ಮೃತದೇಹಗಳನ್ನು ಅವರವರ ಗ್ರಾಮಗಳಿಗೆ ಕಳುಹಿಸಿಕೊಡಲಾಗುತ್ತಿದೆ ಎಂದರು.