ಕುಷ್ಟಗಿ(ಕೊಪ್ಪಳ): ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಸೇವಾ ಭದ್ರತೆಗೆ ಸರ್ಕಾರ ಉನ್ನತ ಮಟ್ಟದ ಸಮಿತಿ ರಚನೆ ಅಶ್ವಾಸನೆ ನೀಡಿದ್ದರಿಂದ ಮೇ 27ರವರೆಗೂ ಗಡುವು ವಿಧಿಸಲಾಗಿದೆ. ಈ ಬಗ್ಗೆ ಸಕಾರಾತ್ಮಕ ಕ್ರಮವಹಿಸದೆ ಇದ್ದಲ್ಲಿ ಮೇ 28ರಿಂದ ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ವಿಶ್ವಾರಾಧ್ಯ ಯಮೋಜಿ ಹೇಳಿದರು.
ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ಸ್ಗಳಿಗೆ ಸನ್ಮಾನಿಸಿ ಬಳಿಕ ಈಟಿವಿ ಭಾರತ ಜೊತೆ ಮಾತನಾಡಿದ ಅವರು. ಸರ್ಕಾರದ ಆಶ್ವಾಸನೆ ಮೇರೆಗೆ ಪ್ರತಿಭಟನೆಯನ್ನು ಸಾಂಕೇತಿಕವಾಗಿ ವಾಪಸ್ ಪಡೆಯಲಾಗಿದೆ ಎಂದರು.
ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆಗೆಗಾಗಿ ಸರ್ಕಾರವು ಉನ್ನತ ಸಮಿತಿ ರಚಿಸಿ ನಮ್ಮ ಬೇಡಿಕೆ ಈಡೇರಿಸಲು ಒಂದು ತಿಂಗಳ ಕಾಲಾವಕಾಶ ಕೋರಿದೆ. ಮೇ 21ರಿಂದ 27ರವರಗೆ ಸರ್ಕಾರ ಸ್ಪಷ್ಟ ನಿಲುವು ತೆಗೆದುಕೊಳ್ಳದೆ ಇದ್ದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಹೇಳಿದರು.
ಕಳೆದ ಒಂದೂವರೆ ವರ್ಷದಿಂದ ಪ್ರತಿಭಟನೆ ನಡೆಸುತ್ತ ಬರುತ್ತಿದ್ದು, ಸರ್ಕಾರ ಕೇವಲ ಅಶ್ವಾಸನೆಗಳನ್ನು ನೀಡಿದೆ. ಸರ್ಕಾರಗಳು, ಮಂತ್ರಿಗಳು ಬದಲಾಗಿದ್ದು, ಬೇಡಿಕೆಗಳು ಯಥಾವತ್ತಾಗಿವೆ. ಕೊರೊನಾ ವೈರಸ್ನ ಸಂಕಷ್ಟದ ನಡುವೆಯೂ ನಮ್ಮ ಸಿಬ್ಬಂದಿ, ಸೌಲಭ್ಯಗಳ ಕೊರತೆಗಳನ್ನು ಲೆಕ್ಕಿಸದೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.