ಕುಷ್ಟಗಿ (ಕೊಪ್ಪಳ): ಮಳೆ ಕೊರತೆ ಎದುರಿಸುತ್ತಿದ್ದ ಈ ಭಾಗದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ನಿತ್ಯ ತುಂತುರು ಮಳೆಯಾಗುತ್ತಿದ್ದು, ಬಯಲು ಸೀಮೆಯ ಪ್ರದೇಶವೀಗ ಅರೆ ಮಲೆನಾಡಾಗಿ ಬದಲಾಗಿದೆ.
ಇಡೀ ದಿನ ಮೋಡಕವಿದ ವಾತಾವರಣ, ತಂಪು ಗಾಳಿಯೊಂದಿಗೆ ಆಗಾಗ್ಗೆ ಸಣ್ಣಗೆ ಮಳೆ ಸುರಿಯುತ್ತಿದೆ. ಅಲ್ಲದೆ ಬಿಸಿಲ ಜೊತೆಗೆ ಮಳೆಯೂ ಸಹ ಸುರಿಯುತ್ತಿದೆ.
ವಾತಾವರಣದಲ್ಲಾದ ದಿಢೀರ್ ಬದಲಾವಣೆಯಿಂದ ಜನ ಹೊರ ಬರಲು ಹಿಂದೇಟು ಹಾಕುವಂತಾಗಿದೆ. ಮನೆಯ ಹೊರಗೆ ಕಾಲಿಟ್ಟರೆ ಸೋನೆ ಮಳೆ ಸಿಂಚನಗೈಯ್ಯುತ್ತಿದೆ. ಆರಂಭದ ಮುಂಗಾರು ವೈಫಲ್ಯ ಇದೀಗ ಚುರುಕುಗೊಂಡಿದೆ. ಕಳೆದ ಬುಧವಾರ ಹದವರಿತ ತುಂತುರು ಮಳೆಯಾಗಿದೆ.
ಸದ್ಯ ತೊಗರಿ, ಸೂರ್ಯಕಾಂತಿ, ಸಜ್ಜೆ ಮತ್ತಿತರೆ ಧಾನ್ಯಗಳ ಬಿತ್ತನೆಗೆ ರೈತರು ಮುಂದಾಗಿದ್ದು, ಕೃಷಿ ಚಟುವಟಿಕೆ ವೇಗ ಪಡೆದುಕೊಂಡಿದೆ.