ಕೊಪ್ಪಳ: ಜಿಲ್ಲೆಯ ಐತಿಹಾಸಿಕ ಸ್ಥಳವಾದ ಅಂಜನಾದ್ರಿ ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಇದೇ ಡಿಸೆಂಬರ್ ಅಂತ್ಯದೊಳಗೆ ಕಾಂಗ್ರೆಸ್ ಮುಖಂಡರಾದ ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅಂಜನಾದ್ರಿಗೆ ಭೇಟಿ ನೀಡಲಿದ್ದಾರೆಂದು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ತಿಳಿಸಿದ್ದು, ರಾಜಕೀಯ ವಲಯದಲ್ಲಿ ಕೂತೂಹಲ ಮೂಡಿಸಿದೆ.
ಹಿಂದುತ್ವದ ನೆಲೆಯಲ್ಲಿಯೇ ಬಿಜೆಪಿ ಕಳೆದ ಎರಡು ಬಾರಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಜೊತೆಗೆ ಹಲವು ರಾಜ್ಯಗಳಲ್ಲಿ ಬಿಜೆಪಿ ಹಿಂದುತ್ವದ ಹೆಸರಲ್ಲೇ ವಿಜಯ ಪತಾಕೆ ಹಾರಿಸುವ ಮೂಲಕ ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ. ಇದರಿಂದ ಎಚ್ಚೆತ್ತಿರುವ ಕಾಂಗ್ರೆಸ್ ಹೈಕಮಾಂಡ್ ಸದ್ದಿಲ್ಲದೇ ಹಿಂದುಗಳ ಮತಗಳನ್ನು ಸೆಳೆಯುವ ಪ್ರಯತ್ನದಲ್ಲಿದೆ. ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ಅಂಜನಾದ್ರಿಗೆ ಕಳುಹಿಸುವ ಮೂಲಕ ಕಾಂಗ್ರೆಸ್ ಹಿಂದುತ್ವ ವಿರೋಧಿ ಎಂಬ ಹಣೆಪಟ್ಟಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಚರ್ಚೆಗಳು ಶುರುವಾಗಿವೆ.
ಬಿಜೆಪಿ ಬಜೆಟ್ನಲ್ಲಿ 100 ಕೋಟಿ ರೂ. ಅನುದಾನ ಘೋಷಿಸಿದೆ. ಇತ್ತೀಚೆಗೆ ರಾಜ್ಯದ ಸಿಎಂ ನೇತೃತ್ವದಲ್ಲಿ ಈ ಭಾಗದ ಸರ್ವ ಪಕ್ಷಗಳ ನಾಯಕರನ್ನು ಕರೆದು ಅಂಜನಾದ್ರಿ ಅಭಿವೃದ್ಧಿ ಕುರಿತು ಸಭೆ ನಡೆಸಿದೆ. ಬರುವ ಸಾರ್ವತ್ರಿಕ ಚುನಾವಣೆಗೆ ಇದನ್ನೇ ದಾಳವಾಗಿ ಬಳಸಿಕೊಳ್ಳುವ ಲಕ್ಷಣಗಳು ದಟ್ಟವಾಗಿವೆ. ಈ ಸುಳಿವು ಅರಿತಿರುವ ಸ್ಥಳೀಯ ಹಿಂದು, ಮುಸ್ಲಿಂ ಕಾಂಗ್ರೆಸ್ ನಾಯಕರು ಹನುಮ ಜಯಂತಿ ಅಂಗವಾಗಿ ಮಾಲೆ ಧರಿಸಿದ್ದಲ್ಲದೇ ಪಾದಯಾತ್ರೆ ನಡೆಸಿ ತಾವೂ ಹಿಂದು ವಿರೋಧಿಗಳಲ್ಲವೆಂಬ ಸಂದೇಶ ರವಾನಿಸಿದ್ದಾರೆ. ಜೊತೆಗೆ ರಾಜ್ಯ ರಾಷ್ಟ್ರ ಮಟ್ಟದ ನಾಯಕರನ್ನು ಇಲ್ಲಿಗೆ ಕರೆತರುವ ಮೂಲಕ ಮತ ಓಲೈಕೆಯ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ: ಟಾರ್ಗೆಟ್ 150 ಗುರಿ ತಲುಪಲ್ಲ: ಬಿಜೆಪಿ ಹೈಕಮಾಂಡ್ಗೆ ಆಂತರಿಕ ಸಮೀಕ್ಷಾ ವರದಿಗಳ ಆಘಾತ
ಸದ್ಯ ದೇಶಾದ್ಯಂತ ಹನುಮನ ಜನ್ಮ ಸ್ಥಳದ ಕುರಿತು ನಾನಾ ರಾಜ್ಯಗಳು ತಗಾದೆ ತೆಗೆದಿದ್ದು ವಿವಾದ ಹುಟ್ಟಿಕೊಂಡಿದೆ. ಇತ್ತೀಚೆಗೆ ಮಹಾರಾಷ್ಟ್ರದ ಅಂಜನಿಪುರದಲ್ಲಿ ಧಾರ್ಮಿಕ ಮುಖಂಡರು ಚರ್ಚಾಗೋಷ್ಟಿ ಕರೆದಿದ್ದು, ಅಂಜನೇಯ ನಮ್ಮಲ್ಲೇ ಜನಿಸಿದ್ದಾನೆ ಎಂದು ಸಮರ್ಥಿಸುವ ಭರದಲ್ಲಿ ಸಭೆಯಲ್ಲಿ ಕೆಲವರು ಹೊಡೆದಾಟಕ್ಕೆ ಮುಂದಾಗಿದ್ದ ಘಟನೆಗಳು ಜರುಗಿದೆ. ಕರ್ನಾಟಕ ಹೊರತುಪಡಿಸಿ ಉಳಿದ ರಾಜ್ಯದವರು ಸೂಕ್ತ ಪುರಾವೆಗಳನ್ನು ನೀಡುವಲ್ಲಿ ವಿಫಲಾರಾಗಿದ್ದಾರೆ. ಜೊತೆಗೆ ಅಂಜನಾದ್ರಿ ಅಭಿವೃದ್ಧಿ ವಿಚಾರ ಹಾಗೂ ಹನುಮ ಜನಿಸಿದ ಸ್ಥಳ ಇದೆ ಎಂದು ದೃಢೀಕರಿಸುವುದಕ್ಕಾಗಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆದಿದೆ. ಈ ಮೂಲಕ ಹಿಂದುಗಳ ಮತಗಳು ಮತ್ತೊಮ್ಮೆ ಬಿಜೆಪಿಗೆ ಮೀಸಲಾಗುವಂತೆ ಯೋಜನೆ ರೂಪಿಸುತ್ತಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಗಮನಿಸುತ್ತಿರುವ ಕೈ ನಾಯಕರು ರಾಜ್ಯ ಸೇರಿದಂತೆ ರಾಷ್ಟ್ರ ಮಟ್ಟದ ನಾಯಕರನ್ನು ಇಲ್ಲಿಗೆ ಕರೆತರುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ಈ ಮೊದಲು ಭೇಟಿ ನೀಡಿದ ಗಣ್ಯರು: ಕೆಲ ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾ ಬೆನ್ ಹಾಗೂ ಅವರ ಸಹೋದರ ಅಂಜನಾದ್ರಿಗೆ ಭೇಟಿ ನೀಡಿ ಆಂಜನೇಯನ ದರ್ಶನ ಪಡೆದಿದ್ದಾರೆ. ಅಂದಿನಿಂದ ಹಲವರ ಚಿತ್ತ ಇತ್ತ ನೆಟ್ಟಿದೆ. ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ಅವರನ್ನು ಕರೆಸುವ ಚಿಂತನೆಯನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ.