ಕುಷ್ಟಗಿ(ಕೊಪ್ಪಳ): ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಮುಷ್ಕರ ಆರಂಭವಾಗಿ 12 ದಿನಗಳಾದರೂ ಸಹ ಸರ್ಕಾರದಿಂದ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಸಿಬ್ಬಂದಿ ನಿನ್ನೆ ಕೂಡ ಉರಿಬಿಸಿಲನ್ನು ಲೆಕ್ಕಿಸದೆ ಧರಣಿ ನಡೆಸಿದ್ದಾರೆ.
ತಹಶೀಲ್ದಾರ ಕಚೇರಿ ಆವರಣದಲ್ಲಿ ಧರಣಿನಿರತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಹಶೀಲ್ದಾರ ಎಂ. ಸಿದ್ದೇಶ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾನಿರತ ಚೆನ್ನಮ್ಮ ಹಿರೇಮಠ ಮಾತನಾಡಿ, ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ ಸೇರಿದಂತೆ 14 ಬೇಡಿಕೆಗಳ ಈಡೇರಿಕೆಗೆ ಮುಷ್ಕರ ಹಮ್ಮಿಕೊಳ್ಳಲಾಗಿದೆ. ತಮ್ಮ 10 ವರ್ಷಗಳವರೆಗಿನ ಸೇವಾವಧಿಯಲ್ಲಿ ಮೂರು ಸರ್ಕಾರಗಳು ಬಂದು ಹೋದರು ಕೂಡ ಈ 14 ಬೇಡಿಕೆಗಳಲ್ಲಿ ಒಂದು ಬೇಡಿಕೆ ಸಹ ಈಡೇರಿಸಿಲ್ಲ. 10 ವರ್ಷವಾದರೂ 10 ಸಾವಿರ ರೂ.ನಲ್ಲಿ ಜೀವನ ಸಾಗಿಸಬೇಕಿದ್ದು, ಈ ವೇತನದಲ್ಲಿ ಜೀವನ ನಿರ್ವಹಿಸುವುದು ಸಾಕು ಸಾಕಾಗಿದೆ. ಇನ್ನಾದರೂ ಜೀತ ಪದ್ಧತಿ ನಿಲ್ಲಿಸಿ, ಸೇವೆ ಕಾಯಂಗೊಳಿಸಿ ಎಂದ ಅವರು, ಸರ್ಕಾರ ಬೇಡಿಕೆ ಈಡೇರಿಸದೆ ಸೇವೆಗೆ ಬಳಸಿಕೊಂಡು ಕಷ್ಟ ಕೊಡುತ್ತಿದ್ದೀರಿ ಎಂದು ಅಳಲು ತೋಡಿಕೊಂಡರು.