ಕೊಪ್ಪಳ: ಕಲಬುರಗಿ ವಿಮಾನ ನಿಲ್ದಾಣದ ಸ್ಥಾಪನೆ ಹೆಸರಲ್ಲಿ ಬಂಜಾರ ಸಮುದಾಯದ ಸಂತ ಸೇವಾಲಾಲ್ ಮಹಾರಾಜರು ಹಾಗೂ ಮರಿಯಮ್ಮ ದೇವಿ ದೇವಸ್ಥಾನ ಧ್ವಂಸಗೊಳಿಸಿದವರ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ವಿಮಾನ ನಿಲ್ದಾಣಕ್ಕೆ ಸಂತ ಸೇವಾಲಾಲ್ ಹೆಸರು ನಾಮಕರಣ ಮಾಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಬಂಜಾರ ಸೇವಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಗಂಜ್ ಸರ್ಕಲ್ನಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಕಲಬುರಗಿಯಲ್ಲಿ ಸ್ಥಾಪನೆಯಾಗಿರುವ ವಿಮಾನ ನಿಲ್ದಾಣಕ್ಕಾಗಿ ಬಂಜಾರ ಸಮುದಾಯದವರು ಸುಮಾರು 750 ಎಕರೆ ಭೂಮಿ ನೀಡಿದ್ದಾರೆ. ಅತೀ ಕಡಿಮೆ ದರದಲ್ಲಿ ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದ್ದಾರೆ. ವಿಮಾನ ನಿಲ್ದಾಣಕ್ಕೆ ಸೇವಾಲಾಲ್ ಮಹಾರಾಜರ ಹೆಸರು ಇಡುವುದಾಗಿ ಅಂದಿನ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದರು, ಆದರೆ ಅದು ಆಗಿಲ್ಲ.
ಅಲ್ಲದೆ ವಿಮಾನ ನಿಲ್ದಾಣದ ಸಮೀಪವಿದ್ದ ಸೇವಾಲಾಲ್ ಮಹಾರಾಜರು ಹಾಗೂ ಮರಿಯಮ್ಮ ದೇವಿ ದೇವಸ್ಥಾನವನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳ ಹುನ್ನಾರದಿಂದ ಧ್ವಂಸಗೊಳಿಸಲಾಗಿದೆ. ಆದ್ದರಿಂದ ದೇವಾಲಯ ಧ್ವಂಸಗೊಳಿಸಿದವರ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಕಲಬುರಗಿ ವಿಮಾನ ನಿಲ್ದಾಣಕ್ಕೆ ಸೇವಾಲಾಲ್ ಮಹಾರಾಜರ ಹೆಸರನ್ನು ನಾಮಕರಣ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.