ಗಂಗಾವತಿ: ಇಲ್ಲಿನ ಜೂನಿಯರ್ ಕಾಲೇಜು ಮೈದಾನದ ವಾಕಿಂಗ್ ಟ್ರ್ಯಾಕ್ ಪಕ್ಕದಲ್ಲಿ ಕುಡಿಯುವ ನೀರಿನ ಪೈಪ್ ಒಡೆದ ಪರಿಣಾಮ ಇಂದು ನಡೆಯುತ್ತಿದ್ದ ಪಿಯು ಪರೀಕ್ಷೆಗೆ ಸಾವಿರಾರು ಮಕ್ಕಳು ಕೊಚ್ಚೆ ನೀರನ್ನು ದಾಟಿಕೊಂಡು ಹೋದ ಘಟನೆ ನಡೆಯಿತು.
ಕಳೆದ ಮೂರು ನಾಲ್ಕು ದಿನಗಳಿಂದ ಕುಡಿಯುವ ನೀರಿನ ಪೈಪ್ ಒಡೆದಿದ್ದು, ಅದರ ದುರಸ್ತಿಗೆ ಅತ್ತ ಜೂನಿಯರ್ ಕಾಲೇಜಿನ ಆಡಳಿತ ಮಂಡಳಿ, ಇತ್ತ ನಗರಸಭೆ ನಿರ್ಲಕ್ಷ್ಯ ವಹಿಸಿವೆ ಎನ್ನಲಾಗಿದೆ. ಪರಿಣಾಮ ಅಪಾರ ಪ್ರಮಾಣದ ನೀರು ಚರಂಡಿ ಸೇರಿದೆ. ವ್ಯರ್ಥವಾಗುತ್ತಿರುವ ಕುಡಿಯುವ ನೀರು ಕೊಚ್ಚೆ ನೀರಿನೊಂದಿಗೆ ಸೇರಿ ಇಡೀ ಮೈದಾನದಲ್ಲಿ ಹರಡುತ್ತಿದೆ. ಇದರಿಂದ ನಿತ್ಯ ನೂರಾರು ಜನ ಬೆಳಗಿನ ಹೊತ್ತು ವಾಯು ವಿಹಾರಕ್ಕೆ ಬರುವುದರಿಂದ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಕೂಡಲೇ ನಗರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.