ಕುಷ್ಟಗಿ: ಲಾಕ್ಡೌನ್ನ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಯಮವನ್ನು ತಾಲೂಕಿನ ಕಲಾಲ ಬಂಡಿಯ ಕೆಲವು ಗ್ರಾಮಸ್ಥರು ಕುಡಿಯುವ ನೀರು ಪಡೆಯುವಾಗ ಉಲ್ಲಂಘಿಸಿದ ಘಟನೆ ನಡೆದಿದೆ.
3ನೇ ಹಂತದ ಲಾಕ್‌ಡೌನ್ ಸಡಿಲಿಕೆ ಬಳಿಕ ನಗರಗಳಲ್ಲಿ ಉಳಿದಿದ್ದ ಸ್ಥಳೀಯರು ಗ್ರಾಮದತ್ತ ವಾಪಸ್ ಆಗಿದ್ದಾರೆ. ಗ್ರಾಮದಲ್ಲಿ ಜನತೆಗೆ ಅಗತ್ಯವಾದಷ್ಟು ಕುಡಿಯುವ ನೀರು ಲಭ್ಯವಾಗುತ್ತಿಲ್ಲ. ಹೀಗಾಗಿ, ನೀರು ಹಿಡಿಯುವ ಭರದಲ್ಲಿ ಸಾಮಾಜಿಕ ಅಂತರದ ನಿಯಮವನ್ನು ಉಲ್ಲಂಘಿಸುತ್ತಿದ್ದಾರೆ. ಕೆಲವರು ಮುಖಗವಸು ಧರಿಸತೆ ಓಡಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಚಳಗೇರ ಗ್ರಾಮ ಪಂಚಾಯಿತಿ ಸದಸ್ಯ ಯಮನಪ್ಪ ಪೂಜಾರ ಮಾತನಾಡಿ, ಕಲಾಲ ಬಂಡಿ ಗ್ರಾಮದಲ್ಲಿ ಅಂತರ್ಜಲ ಬತ್ತಿದ್ದು, ಕುಡಿಯು ನೀರಿನ ಕೊರತೆ ಉಂಟಾಗಿದೆ. ಸಮರ್ಪಕವಾಗಿ ನೀರು ಪೂರೈಕೆಯಾದರೆ ಈ ಸಮಸ್ಯೆ ಇರುವುದಿಲ್ಲ. ವಿದ್ಯುತ್ ಕಡಿತವಾದ ಸಮಯದಲ್ಲಿ ನೀರಿನ ತೊಂದರೆ ಸಾಮಾನ್ಯ ಎಂಬುವಂತಿದೆ. ಸರಿಯಾದ ಮಳೆ ಇಲ್ಲದ ಕಾರಣ ಕೊಳವೆಬಾವಿಗಳು ಬತ್ತಿ ಹೋಗಿವೆ. ಮಳೆಯಾದರೆ ಮಾತ್ರ ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರೆಯುತ್ತದೆ ಎಂದರು.
ಶಾಸಕ ಅಮರೇಗೌಡ ಬಯ್ಯಾಪುರ ಮಾತನಾಡಿ, ಹೊಸದಾಗಿ ಕೊಳವೆ ಬಾವಿ ಕೊರೆಸಿದ್ದು, ಅದರಲ್ಲಿ ನೀರು ಲಭ್ಯವಾಗಿದೆ. ಮೋಟರ್ ಅಳವಡಿಸಿದ ನಂತರ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆ ಆಗುತ್ತದೆ ಎಂದರು.