ಗಂಗಾವತಿ: ಕೋವಿಡ್ ಮುನ್ನೆಚ್ಚರಿಕೆ ಡೋಸ್ ಪಡೆಯದೇ ಇದ್ದರೂ, ಡೋಸ್ ಪಡೆದ ಬಗ್ಗೆ ಮೊಬೈಲ್‌ಗೆ ಸಂದೇಶ ಬರುತ್ತಿದ್ದು, ಇದೀಗ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ.
ವ್ಯಾಕ್ಸಿನ್ ಪಡೆಯದಿದ್ದರೂ ಮೊದಲ ಡೋಸ್ ಪಡೆದವರಿಗೆ, ಎರಡನೇ ಡೋಸ್ ಪಡೆದಿರುವ, ಎರಡನೇ ಡೋಸ್ ಪಡೆಯದಿದ್ದರೂ ಬೂಸ್ಟರ್ ಡೋಸ್ ಪಡೆದ ಸಂದೇಶ ಬರುತ್ತಿವೆ. ಅಲ್ಲದೇ ಕೇವಲ ಒಂದು ಡೋಸ್ ಪಡೆದವರಿಗೆ ನೀವು ಬೋಸ್ಟರ್ ಡೋಸ್ ಪಡೆದುಕೊಂಡಿದ್ದೀರಿ ಎಂದು ಸಂದೇಶ ಬರುತ್ತಿವೆ ಎನ್ನಲಾಗ್ತಿದೆ.
ಆರೋಗ್ಯ ಇಲಾಖೆಯಿಂದ ಕೆಲ ಗ್ರಾಹಕರ ಮೊಬೈಲ್ ನಂಬರ್ಗೆ ಒಟಿಪಿ ಬರುತ್ತಿವೆ. ಗ್ರಾಹಕರು ಯಾವುದೇ ಸ್ಪಂದನೆ ನೀಡದ್ದಿದ್ದರೂ ಕ್ಷಣಾರ್ಧದಲ್ಲಿ ನಿಮಗೆ ಎರಡನೇ ಡೋಸ್ ಅಥವಾ ಬೂಸ್ಟರ್ ಡೋಸ್ ನೀಡಿರುವುದು ಯಶಸ್ವಿಯಾಗಿದೆ ಎಂಬ ಸಂದೇಶ ಬರುತ್ತಿವೆ.
ಇಲ್ಲಿನ ಕಿಲ್ಲಾ ಏರಿಯಾದ ವ್ಯಕ್ತಿಯೊಬ್ಬರಿಗೆ ಬೂಸ್ಟರ್ ಡೋಸ್ ಪಡೆದುಕೊಂಡಿದ್ದಾಗಿ ಮೊಬೈಲ್‌ಗೆ ಮಾಹಿತಿ ಬಂದಿದೆ. ಆ ವ್ಯಕ್ತಿ ಇಲಾಖೆಯ ಲಿಂಕ್ ಕ್ಲಿಕ್ ಮಾಡಿದ್ದಾಗಿ ಪ್ರಮಾಣ ಪತ್ರ ಕೂಡ ಬಂದಿದೆ. ಮತ್ತೊಬ್ಬ ವ್ಯಕ್ತಿ 2021ರ ಫೆ.22ರಂದು ಕೇವಲ ಒಂದೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.
ಆದರೆ, ಆ ವ್ಯಕ್ತಿಗೆ 2021ರ ಮೇ 10ರಂದು 2ನೇ ಡೋಸ್ ಪಡೆದುಕೊಂಡಿದ್ದಾಗಿ ಪ್ರಮಾಣಪತ್ರ ಜನರೇಟರ್ ಮಾಡಲಾಗಿದೆ. ಅಲ್ಲದೇ ಈ ವ್ಯಕ್ತಿ ಇದುವರೆಗೂ ಬೂಸ್ಟರ್ ಡೋಸ್ ಪಡೆದುಕೊಂಡಿಲ್ಲದಿದ್ದರೂ ಲಸಿಕೆ ಪಡೆದ ಸಂದೇಶ ಬಂದಿವೆ. ಆರೋಗ್ಯ ಇಲಾಖೆಯ ಈ ಕ್ರಮ ಜನರಲ್ಲಿ ಸಾಕಷ್ಟು ಅನುಮಾನ ಮತ್ತು ಗೊಂದಲಕ್ಕೆ ಕಾರಣವಾಗಿದೆ.
ಈ ಬಗ್ಗೆ 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯೆ ನೀಡಿರುವ ತಾಲೂಕು ಆರೋಗ್ಯಾಧಿಕಾರಿ ರಾಘವೇಂದ್ರ, ಇಂತಹ ಒಂದೆರಡು ಪ್ರಕರಣಗಳು ನನ್ನ ಗಮನಕ್ಕೆ ಬಂದಿವೆ. ಸಾರ್ವಜನಿಕರು ಕೋವಿಡ್ ಸಂಬಂಧಿತ ಯಾವುದೇ ದೂರು, ಸಮಸ್ಯೆ ಇದ್ದರೆ, ತಾಲೂಕು ವಾರ್ ರೂಂಗೆ ದೂರು ಸಲ್ಲಿಸಿದರೆ ಪರಿಶೀಲಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ದಾವಣಗೆರೆ : ಆಧುನಿಕ ಟಚ್, ಸ್ಮಾರ್ಟ್ ಸಿಟಿ ಯೋಜನೆಯಿಂದ ಸ್ಮಾರ್ಟ್ ಆದವು ಶಾಲಾ-ಕಾಲೇಜುಗಳು