ಕೊಪ್ಪಳ : ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಕೊಪ್ಪಳ ಜಿಲ್ಲೆ ಬರಗಾಲದಿಂದ ತತ್ತರಿಸುತ್ತಿದೆ. ಇದರ ಜೊತೆಗೆ ಹಿಂಗಾರಿಗೂ ಮಳೆಯ ಲಕ್ಷಣಗಳು ಕಾಣದ ಹಿನ್ನೆಲೆಯಲ್ಲಿ ಜನರು ಹೊಟ್ಟೆಪಾಡಿಗಾಗಿ ಗುಳೆ ಹೋಗುತ್ತಿದ್ದು, ಗ್ರಾಮೀಣ ಪ್ರದೇಶಗಳು ಜನರಿಲ್ಲದೇ ಬಣಗುಡುತ್ತಿವೆ.
ಕೈ ಕೊಟ್ಟ ಮುಂಗಾರು, ಹಿಂಗಾರು : ಸದಾ ಬರ ಎದುರಿಸುತ್ತಿರುವ ಕೊಪ್ಪಳ ಜಿಲ್ಲೆಯಲ್ಲಿ ಈ ವರ್ಷವೂ ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟ ಪರಿಣಾಮ ಭೀಕರ ಬರ ಆವರಿಸಿದೆ. ಮುಂಗಾರು ಹಂಗಾಮಿನಲ್ಲಿ ಶೇಕಡಾ 25 ರಷ್ಟು ಮಳೆ ಕೊರತೆಯಾಗಿದೆ. ಈಗ ಹಿಂಗಾರಿನ ಈ ದಿನಗಳಲ್ಲಿ ಮಳೆಯಾಗಬೇಕು. ಆದರೆ, ಇಲ್ಲಿಯವರೆಗೂ ಮಳೆಯಾಗಿಲ್ಲ. ಹೀಗಾಗಿ, ಎರಡು ಹಂಗಾಮಿನ ಬೆಳೆಗಳು ಬಾರದ ಸ್ಥಿತಿಯಿದೆ. ಇದರಿಂದಾಗಿ ರೈತರು ಮುಂದಿನ ದಿನಗಳಲ್ಲಿ ಜೀವನ ಸಾಗಿಸಲು ದೂರದ ಪ್ರದೇಶಗಳಿಗೆ ದುಡಿಯಲು ಗುಳೆ ಹೋಗುತ್ತಿದ್ದಾರೆ.
ಬಣಗುಡುತ್ತಿವೆ ಗ್ರಾಮಗಳು : ಕೊಪ್ಪಳ ಜಿಲ್ಲೆಯಲ್ಲಿ ಶೇಕಡಾ 30 ಕ್ಕಿಂತ ಅಧಿಕ ಜನರು ಕೆಲಸ ಅರಸಿಕೊಂಡು ಬೆಂಗಳೂರು, ಮಂಗಳೂರು, ಬಾಂಬೆ, ತಮಿಳುನಾಡು, ಮೈಸೂರು, ರತ್ನಗಿರಿ ಸೇರಿದಂತೆ ಬೇರೆ ಬೇರೆ ಕಡೆ ದುಡಿಯಲು ಹೋಗಿದ್ದಾರೆ. ಇದರಿಂದಾಗಿ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಬಣಗುಡುತ್ತಿವೆ. ಗ್ರಾಮದ ತುಂಬೆಲ್ಲಾ ಹುಡುಕಿದರು ಕೇವಲ ವಯಸ್ಸಾದವರು, ಚಿಕ್ಕ ಮಕ್ಕಳು ಮಾತ್ರ ಕಾಣಸಿಗುತ್ತಾರೆ. ಅದರಲ್ಲಿ ಬಹುತೇಕ ಕುಟುಂಬಗಳು ಮನೆಗೆ ಬೀಗ ಹಾಕಿ ಗುಳೆ ಹೋಗಿವೆ. ಕೆಲ ತಾಂಡಾಗಳಲ್ಲಿ ಶಾಲೆಗೆ ಹೋಗುವ ಮಕ್ಕಳನ್ನು ಸಹ ಕರೆದುಕೊಂಡು ಹೋಗಿದ್ದಾರೆ. ಇದರಿಂದಾಗಿ ಶಾಲೆಯಲ್ಲಿಯೂ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಅಲ್ಲದೇ, ಶಾಲಾ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಬರ : ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ 21 ತಾಲೂಕುಗಳ ಪಟ್ಟಿ ಬಿಡುಗಡೆ
ಪರಿಹಾರಕ್ಕಾಗಿ ರೈತರ ಆಗ್ರಹ : ಕೊಪ್ಪಳವನ್ನು ಈಗಾಗಲೇ ಬರಪೀಡಿತ ಜಿಲ್ಲೆ ಎಂದು ಸರ್ಕಾರದಿಂದ ಘೋಷಣೆ ಮಾಡಲಾಗಿದೆ. ಆದರೆ, ಬರ ಪರಿಹಾರದ ಹಣ ಬರುವುದು ಯಾವಾಗ? ಎಂಬುದು ನಿರ್ಧಾರವಾಗಿಲ್ಲ. ಕನಿಷ್ಠ ಪಕ್ಷ ಬರ ಕಾಮಗಾರಿಗಳು ಆರಂಭವಾಗಿಲ್ಲ, ನರೇಗಾ ಯೋಜನೆಯಲ್ಲಿ ಸಮರ್ಪಕ ಕೆಲಸ ನೀಡುತ್ತಿಲ್ಲ, ಕಳೆದ ಎರಡು ತಿಂಗಳ ಹಿಂದೆ ಮಾಡಿದ ಕೆಲಸದ ಕೂಲಿ ಇದುವರೆಗೂ ಬಂದಿಲ್ಲ. ಇದರಿಂದಾಗಿ ಹೊಟ್ಟೆಪಾಡಿಗಾಗಿ ಜನ ಗುಳೆ ಹೋಗುತ್ತಿದ್ದಾರೆ. ಸರ್ಕಾರ ಶೀಘ್ರವೇ ಬರ ಕಾಮಗಾರಿ, ನರೇಗಾ ಯೋಜನೆಯಲ್ಲಿ ನಿತ್ಯ ಕೆಲಸ ನೀಡಬೇಕೆಂದು ಜನರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಬರ : ಕೇಂದ್ರ ತಂಡಕ್ಕೆ ನಮ್ಮ ವಸ್ತುಸ್ಥಿತಿಯ ಮನವಿ ಮನವರಿಕೆಯಾಗಿದೆ- ಸಚಿವ ಕೃಷ್ಣ ಬೈರೇಗೌಡ
ಕೊಪ್ಪಳವನ್ನು ಈಗಾಗಲೇ ಬರಪೀಡಿತ ಜಿಲ್ಲೆ ಎಂದು ಸರ್ಕಾರ ಘೋಷಣೆ ಮಾಡಿದೆ. ಆದರೆ, ಬರ ಅಧ್ಯಯನ ವರದಿ ಸಲ್ಲಿಕೆ ನೆಪದಲ್ಲಿ ಕಾಲಹರಣ ಮಾಡದೇ ಆದಷ್ಟು ಬೇಗ ಜನರ ಕೈಗೆ ಕೆಲಸ ಕಲ್ಪಿಸಲು ಕ್ರಮ ಕೈಗೊಳ್ಳುವ ಮೂಲಕ ಬರದಿಂದ ತತ್ತರಿಸಿರುವ ಜನರ ಬದುಕಿಗೆ ಸರ್ಕಾರ ನೆರವಾಗಬೇಕಿದೆ.
ಇದನ್ನೂ ಓದಿ : ಬೆಳಗಾವಿ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ 2.78 ಲಕ್ಷ ಹೆಕ್ಟೇರ್ ಬೆಳೆ ಹಾನಿ: ಜಿಲ್ಲಾಧಿಕಾರಿ ಮಾಹಿತಿ