ಗಂಗಾವತಿ (ಕೊಪ್ಪಳ): ಬೇಸಿಗೆ ಬಂತೆಂದರೆ ಸಾಕು ಭೂಮಿಯಲ್ಲಿನ ವಾತಾವರಣ ಬಿಸಿಯಾಗಿ ನೆಲದಾಳದಲ್ಲಿರುವ ವಿಷಜಂತುಗಳು ಹೊರಕ್ಕೆ ಬಂದು ಜನವಸತಿ ಪ್ರದೇಶದಲ್ಲಿನ ತಣ್ಣನೆಯ ಪರಿಸರ ಹುಡುಕಿಕೊಂಡು ಹೋಗುತ್ತವೆ. ಹೀಗೆ ಬಂದ ಹಾವಿನ ಸಣ್ಣ ಮರಿಯೊಂದು ಬೈಕೊಂದನ್ನು ಏರಿ ಎರಡು ಗಂಟೆಗೂ ಹೆಚ್ಚು ಕಾಲ ಜನರಲ್ಲಿ ಆತಂಕ ಸೃಷ್ಟಿಸಿದ ಘಟನೆ ನಗರದಲ್ಲಿ ನಡೆದಿದೆ.
ಇಲ್ಲಿನ ನಗರಸಭೆಯ ನೂತನ ಕಟ್ಟಡದ ಹಿಂದಿರುವ ಡಾ ಬಾಬು ಜಗಜೀವನರಾಂ ವೃತ್ತದಲ್ಲಿ ಈ ಘಟನೆ ನಡೆದಿದ್ದು, ಬೈಕನ್ನೇರಿದ ಹಾವು ಹೊರಕ್ಕೆ ಬಾರದೆ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ವಾಹನ ಮಾಲೀಕನನ್ನು ಚಿಂತೆಗೀಡುಮಾಡಿತ್ತು. ಕೊನೆಗೆ ಹಾವುಗಳನ್ನು ಹಿಡಿಯುವ ಪಂಪಾನಗರದ ಮೆಹಬೂಬ್ ಎಂಬ ಉರಗತಜ್ಞ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದರು. ನಂತರ ಹಾವಿಗೆ ಯಾವುದೇ ಪ್ರಾಣಾಪಾಯವಾಗದಂತೆ ಸುರಕ್ಷಿತವಾಗಿ ಹಿಡಿದು ಜನವಸತಿ ಪ್ರದೇಶದಿಂದ ದೂರಕ್ಕೆ ಹೋಗಿ ಬಿಟ್ಟು ಬಂದರು.
ನಡೆದಿದ್ದಾದರೂ ಏನು..? ವಡ್ಡರಹಟ್ಟಿ ಗ್ರಾಮ ಪಂಚಾಯಿತಿಯ ಸದಸ್ಯ ಪ್ರಭುರಾಜ ಎಂಬುವವರು ಕೆಲಸದ ನಿಮಿತ್ತ ನಗರಕ್ಕೆ ಆಗಮಿಸಿದ್ದರು. ಜಗಜೀವನರಾಂ ವೃತ್ತದ ಹತ್ತಿರ ಜೆರಾಕ್ಸ್ ಅಂಗಡಿ ಬಳಿಯ ಗಿಡದ ನೆರಳಿನಲ್ಲಿ ಬೈಕ್ ನಿಲ್ಲಿಸಿದ್ದಾರೆ. ನಂತರ ಕೆಲಸ ಮುಗಿಸಿಕೊಂಡು ವಾಪಸ್ ಬಂದು ಇನ್ನೇನು ವಾಹನವೇರಿ ಹೊರಡಬೇಕು ಎನ್ನುವಷ್ಟರಲ್ಲಿ ಗಿಡದಿಂದ ಹಾವೊಂದು ಬೈಕ್ ಮೇಲೆ ಬಿದ್ದಿದೆ.
ಹಾವನ್ನು ಓಡಿಸಲು ಅಲ್ಲಿದ್ದವರು ಶಬ್ದ ಮಾಡಿದ್ದಾರೆ. ಇದರಿಂದ ಗಲಿಬಿಲಿಗೊಂಡ ಹಾವು ತಕ್ಷಣ ಬೈಕ್ ಸೀಟಿನ ಅಡಿಗೆ ನುಸುಳಿಕೊಂಡು ಹೋಗಿ ಕುಳಿತುಕೊಂಡಿದೆ. ಬಳಿಕ ಬೈಕ್ ಮಾಲೀಕ ನಿಧಾನವಾಗಿ ಸೀಟನ್ನು ತೆಗೆದು ನೋಡಿದರೆ ಅಲ್ಲಿ ಹಾವು ಕಂಡು ಬರಲಿಲ್ಲ. ಒಂದು ಬಕೆಟ್ ನೀರು ತಂದು ಬೈಕ್ ಮೇಲೆ ಸುರಿದಾಗ ಬೈಕಿಂದ ಹೊರ ಬಂದ ಹಾವು ಅಲ್ಲಿಯೇ ಪಕ್ಕದಲ್ಲಿ ನಿಲ್ಲಿಸಿದ್ದ ಮೆಹಬೂಬ್ ಎಂಬುವವರ ಬೈಕ್ ಏರಿದೆ. ಈ ವೇಳೆ ದೊಡ್ಡ ಕಟ್ಟಿಗೆಯಿಂದ ಹೊರಕ್ಕೆ ತಳ್ಳಲು ಕೆಲವರು ಯತ್ನ ಮಾಡಿದ್ದಾರೆ. ಆದರೆ ಹಾವು, ಬೈಕಿನ ಮತ್ತಷ್ಟು ಒಳಕ್ಕೆ ಹೋಗಿದೆ.
ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ನಡೆದ ಈ ಪ್ರಹಸನ ಮುಕ್ತಾಯವಾಗದ್ದರಿಂದ ಕೊನೆಗೆ ಅಲ್ಲಿದ್ದ ವ್ಯಕ್ತಿಯೊಬ್ಬರ ಸಲಹೆ ಮೇರೆಗೆ ಹಾವುಗಳನ್ನು ಹಿಡಿಯುವ ಪಂಪಾನಗರದ ಮೆಹಬೂಬ ಎಂಬುವವರನ್ನು ಕರೆತರಲಾಯಿತು. ಕೊನೆಗೆ ಹಾವನ್ನು ಸುರಕ್ಷಿತವಾಗಿ ಹಿಡಿದ ಮೆಹಬೂಬ್, ನಗರದ ಸಮೀಪ ಇರುವ ಗುಡ್ಡದ ಪ್ರದೇಶಕ್ಕೆ ಹಾವನ್ನು ಬಿಟ್ಟು ಬಂದರು.
ಹಾವು ನಿರುಪದ್ರವಿ ಎಂದ ಉರಗತಜ್ಞ : ಸಹಸ್ರಾರು ಜಾತಿಯ ಹಾವುಗಳು ಭೂಮಿಯ ಮೇಲಿವೆ. ಈ ಪೈಕಿ ಕೇವಲ ಐದರಿಂದ ಏಳರಷ್ಟು ಹಾವುಗಳು ಮಾತ್ರ ವಿಷಕಾರಿಯಾಗಿವೆ. ಮಿಕ್ಕ ಎಲ್ಲವೂ ನಿರುಪದ್ರವಿಗಳಾಗಿದ್ದು, ಹಾವುಗಳಿಂದ ಮನುಷ್ಯನಿಗೆ ಯಾವುದೇ ತೊಂದರೆಯಿಲ್ಲ ಎಂದು ಉರಗತಜ್ಞ ಮೆಹಬೂಬ್ ತಿಳಿಸಿದ್ದಾರೆ.
ಹಾವುಗಳನ್ನು ಹೊಡೆಯಬಾರದು-ಮೆಹಬೂಬ್: ಹಾವುಗಳು ಪರಿಸರ ಸ್ನೇಹಿಯಾಗಿದ್ದು, ಮನುಷ್ಯನಿಗೆ ಪೂರಕವಾಗಿ ಜೀವನ ಮಾಡುತ್ತವೆ. ಬೇಸಿಗೆಯಲ್ಲಿ ಉಂಟಾಗುವ ಬಿಸಿಲಿನ ತಾಪಕ್ಕೆ ಭೂಮಿಯಿಂದ ಹೊರಗೆ ಬರುತ್ತವೆ. ಆಗ ಮಾತ್ರ ಜನರು ಎಚ್ಚರಿಕೆಯಿಂದ ಇರಬೇಕು. ಯಾವುದೇ ಕಾರಣಕ್ಕೂ ಹಾವುಗಳನ್ನು ಹೊಡೆಯಬಾರದು. ಒಂದು ವೇಳೆ ಹಾವುಗಳು ಬಂದರೂ ಕೆಲ ಸಮಯದ ಬಳಿಕ ತಮ್ಮ ಪಾಡಿಗೆ ತಾವು ಹೊರಟು ಹೋಗುತ್ತವೆ. ಯಾರಾದರು ಅವುಗಳಿಗೆ ತೊಂದರೆ ನೀಡಿದರೆ ಮಾತ್ರ ತಮ್ಮ ಪ್ರಾಣ ರಕ್ಷಣೆಗಾಗಿ ಹೋರಾಡುತ್ತವೆ ಎಂದು ಮೆಹಬೂಬ್ ಅವರು ಹೇಳಿದರು.
ಇದನ್ನೂ ಓದಿ : ರಕ್ಷಿಸಲು ಹೋದಾಗ ಕಚ್ಚಿದ ಹಾವು.. ಹಿಡಿದು ಆಸ್ಪತ್ರೆಗೆ ಬಂದ ಭೂಪ, ಉರಗಕ್ಕೂ ಚಿಕಿತ್ಸೆ ಕೊಡಿಸಲು ಪಟ್ಟು