ಗಂಗಾವತಿ/ಕೊಪ್ಪಳ: ಸ್ಮಶಾನ ಎಂದಾಕ್ಷಣ ಕಣ್ಣಿಗೆ ಕಾಣೋದು ಬರೀ ಶವ ಸುಡುವ, ಹೂಳಿಕ್ಕುವ ಜಾಗ, ಗೋರಿಗಳು. ಆದರೆ ಇದೀಗ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ವಿಭಿನ್ನ ಯೋಚನೆಯಿಂದಾಗಿ ರುದ್ರಭೂಮಿಯಲ್ಲಿ ಪಾರ್ಕ್ ನಿರ್ಮಾಣವಾಗಿದೆ.
'ಸ್ಮಶಾನೋದ್ಯಾನ' ಎಂಬ ಹೊಸ ಕಾನ್ಸೆಪ್ಟ್ ಅಡಿ ಉದ್ಯಾನ ಮಾದರಿಯಲ್ಲಿ ಗಂಗಾವತಿ ತಾಲೂಕಿನ ಕೋಟಯ್ಯಕ್ಯಾಂಪ್ ಎಂಬ ಗ್ರಾಮದ ರುದ್ರಭೂಮಿಗೆ ಮಾರ್ಡನ್ ಟಚ್ ಕೊಟ್ಟಿದ್ದು ಇದೀಗ ಸಾರ್ವಜನಿಕರ ಆಕರ್ಷಣೀಯ ಕೇಂದ್ರವಾಗಿದೆ.
ಗ್ರಾಮದ ಹೊರ ಭಾಗದಲ್ಲಿ ಪಾಳು ಬಿದ್ದಿದ್ದು, ಎರಡು ಎಕರೆ ಜಮೀನನ್ನು ನರೇಗಾ ಯೋಜನೆಯಡಿ 22 ಲಕ್ಷ ಖರ್ಚು ಮಾಡಿ ಥೇಟ್ ಉದ್ಯಾನದ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಇಲ್ಲಿಗೆ ಕಾಲಿಟ್ಟರೆ ಸಾಕು ರಾಷ್ಟ್ರಕವಿ ಕುವೆಂಪು ಬರೆದಿರುವ ನಾಡಗೀತೆ ನೆನಪಾಗುತ್ತದೆ. ಈ ಸ್ಮಶಾನದಲ್ಲಿ ಎಲ್ಲ ಜಾತಿ ಜನಾಂಗದವರ ಅಂತ್ಯಕ್ರಿಯೆಗೆ ಅವಕಾಶ ಕಲ್ಪಿಸಲಾಗಿದೆ. ಕವಿ ವಾಣಿಯಂತೆ ಈ ಸ್ಮಶಾನೋದ್ಯಾನದಲ್ಲಿ ಹಿಂದೂ-ಮುಸಲ್ಮಾನ, ಕ್ರೈಸ್ತರು ಸೇರಿದಂತೆ ಎಲ್ಲಾ ಜನಾಂಗಕ್ಕೂ ಸಮಾನ ಅವಕಾಶ ನೀಡಿರುವುದು ವಿಶೇಷ.