ಗಂಗಾವತಿ: ಶಾಲೆ ಆರಂಭವಾದ ಬಳಿಕ ಮಕ್ಕಳ ಬಿಸಿಯೂಟಕ್ಕೆ ಉಪಯೋಗವಾಲಿ ಎಂದು ನರೇಗಾ ಯೋಜನೆಯಲ್ಲಿ ಉದ್ದೇಶಿಸಲಾಗಿರುವ ಸರ್ಕಾರಿ ಶಾಲೆಯ ಆವರಣದಲ್ಲಿ ಪೌಷ್ಠಿಕ ತೋಟ ನಿರ್ಮಾಣ ಕಾರ್ಯಕ್ಕೆ ಸ್ವತಃ ಅಧಿಕಾರಿಯೊಬ್ಬರು ಟ್ರ್ಯಾಕ್ಟರ್ ಚಲಾಯಿಸಿ ಭೂಮಿ ಹದ ಮಾಡಿದ್ದಾರೆ.
ಕನಕಗಿರಿ ತಾಲೂಕಿನ ಮುಸ್ಲಾಪುರ ಗ್ರಾಮದ ಸರಕಾರಿ ಶಾಲೆಯ ಆವರಣದಲ್ಲಿ ಕೈಗೆತ್ತಿಕೊಳ್ಳಲಾದ ಪೌಷ್ಠಿಕ ತೋಟ ನಿರ್ಮಾಣ ಕಾರ್ಯಕ್ಕೆ ಗಂಗಾವತಿ ತಾಲೂಕು ಪಂಚಾಯಿತಿ ಇಒ, ಡಾ. ಡಿ. ಮೋಹನ್, ಸ್ವತಃ ತಾವೇ ಟ್ರಾಕ್ಟರ್ ಏರಿ ಭೂಮಿಯನ್ನು ಬಿತ್ತನೆಗೆ ಪೂರಕವಾಗಿ ಹದ ಮಾಡಿದ್ದಾರೆ.
ಮೂಲತಃ ಕೃಷಿಕ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಈ ಸರ್ಕಾರಿ ನೌಕರ, ಇದಕ್ಕೂ ಮೊದಲು ಪಶುಪಾಲನಾ ಇಲಾಖೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ಕಳೆದ ಹಲವು ವರ್ಷದಿಂದ ತಾಲೂಕು ಪಂಚಾಯಿತಿ ಇಒ ಆಗಿ ಕೆಲಸ ಮಾಡುತ್ತಿದ್ದು, ಪರಿಸರಕ್ಕೆ ಪೂರಕವಾಗಿರುವ ಕೆಲಸಗಳಿಗೆ ಸಿಬ್ಬಂದಿಯನ್ನು ಪ್ರೇರೇಪಿಸಿ ಇಂತಹ ಕೆಲಸಗಳಲ್ಲಿ ತೊಡಗಿಸುತ್ತಾರೆ.